ಹಳ್ಳಿಗಳಲ್ಲಿನ ರಾಮಮಂದಿರಕ್ಕೆ ಗಂಧದ ಕಡ್ಡಿ ಹಚ್ಚದವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ
ಜ್ಞಾನಪ್ರಕಾಶ್ ಸ್ವಾಮೀಜಿ

ಮೈಸೂರು,ಡಿ.9: ಧರ್ಮದ ಅನುಯಾಯಿಗಳು ಎನಿಸಿಕೊಂಡ ಕೊಳಕು ಮನಸ್ಸಿನ ಕೆಲವು ಜನರು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಚಿದ್ರ ಚಿದ್ರ ಮಾಡಿ ಅಪಾಯವನ್ನು ತಂದೊಡ್ಡುವ ಕೆಲಸವನ್ನು ಮಾಡುತ್ತಿವೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಸದ್ಭಾವನಾ ವೇದಿಕೆ ವತಿಯಿಂದ ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಏರ್ಪಡಿಸಿದ್ದ ಸದ್ಭಾವನಾ ವೇದಿಕೆಯ ಉದ್ಘಾಟನೆ ಮತ್ತು “ದೇಶದ ಹಿತಚಿಂತನೆ ನಮ್ಮ ಹೊಣೆಗಾರಿಕೆ” ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಧರ್ಮ ಜಾತಿ ಗ್ರಂಥಗಳಲ್ಲಿಯೂ ಸಮಾಜವನ್ನು ಒಡೆಯುವ ಕೆಲಸ ಮಾಡಿ ಎಂದು ಹೇಳಿಲ್ಲ ಆದರೆ ಧರ್ಮದ ಹೆಸರಿನಲ್ಲಿ ಕೆಲವರು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕರೆ ನೀಡಿದರು.
ಸದ್ಭಾವನೆ ಎಂಬುದು ಕಾಣೆಯಾಗಿದೆ ಕೆಲವು ಕ್ರೂರ ಮನಸ್ಸುಗಳು ದುರ್ಬಾವನೆ ಉಂಟುಮಾಡುತ್ತಿವೆ. ಸದ್ಭಾವನೆ ಎಂಬ ಪದ ಪದಕೋಶಗಳಲ್ಲಷ್ಟೇ ಸೇರಿಕೊಂಡಿದೆ ಎಂದ ಜ್ಞಾನ ಪ್ರಕಾಶ್ ಸ್ವಾಮೀಜಿ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಿಂದೂ ರಾಷ್ಟ್ರ ನಿರ್ಮಾಣಮಾಡಲು ಹೊರಟಿವೆ ಅಂತಹ ವ್ಯಕ್ತಿಗಳನ್ನು ದಲಿತ ಅಲ್ಪಸಂಖ್ಯಾತ ಹಿಂದುಳಿದವರು ದೂರ ಇಡಬೇಕು ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದೀಚೆಗೆ ದೇಶ ಅಪಾಯದ ಅಂಚಿನಲ್ಲಿ ಸಿಲುಕಿದೆ. ಒಬ್ಬ ಗರ್ಭಿಣಿ ಹೆಂಗಸು ಒಂದು ಪ್ಲಾಸ್ಟಿಕ್ ಬಕೆಟ್ ಮುಟ್ಟಿದಳು ಎಂಬ ಕಾರಣಕ್ಕೆ ಆಕೆಯ ಗರ್ಭಕ್ಕೆ ಒದ್ದು ಆಕೆಯನ್ನು ಸಾಯಿಸುತ್ತಾರೆ. ಇನ್ನೊಂದು ಕಡೆ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಕೊಡಲಿಯಿಂದ ಹೊಡೆದು ಸೀಮೆ ಎಣ್ಣೆ ಸುರಿದು ಸುಟ್ಟುಹಾಕುತ್ತಾರೆ. ಇದನ್ನೆಲ್ಲ ನೋಡಿದರೆ ದೇಶ ಎಂತಹ ಸ್ಥಿತಿಗೆ ತಲುಪಿದೆ ಎಂಬ ಆತಂಕ ಎದುರಾಗಿದೆ ಎಂದರು.
ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ ದೇಶ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿದೆ. ಶೇ. 2 ರಷ್ಟಿರುವ ಮಂದಿ ಶೇ.98 ರಷ್ಟು ಇರುವ ಮಂದಿಯನ್ನು ಆಳುತ್ತಿದ್ದಾರೆ. ಆ ಪರಿಸ್ಥಿತಿ ಬದಲಾಗಬೇಕು. ದೇಶದಲ್ಲಿ ದಲಿತರು ಅಲ್ಪಸಂಖ್ಯಾತರು ಒಂದಾದರೆ ನಮ್ಮನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎಂದರು.
ಮನುಸ್ಮೃತಿಗಳ ಮನಸ್ಥಿತಿ ಹೇಗಿದೆ ಎಂದರೆ ಹಳ್ಳಿಗಳಲ್ಲಿರುವ ರಾಮ ಮಂದಿರಕ್ಕೆ ಒಂದು ಗಂಧದಕಡ್ಡಿ ಹಚ್ಚಲು ಆಗದ ಇವರು ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಎಂದು ಧರ್ಮ ಸಂಸದ್ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತಾರೆ. ಅಂಬೇಡ್ಕರ್ ಅವರು ಟಿಪ್ಪು ಸುಲ್ತಾನ್ ಮತ್ತು ಝಾನ್ಸಿ ಲಕ್ಷ್ಮಿಬಾಯಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಉಲ್ಲೇಖಿಸಿರುವುದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇಖ್‍ಜಬಿಲ್ಲ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸದ್ಭಾವನಾ ವೇದಿಕೆ ಸಂಚಾಲಕ ನೂರ್ ಮಹಮದ್ ಮರ್ಚೆಂಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮದ್ ಕುಂಞಿ ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಪ್ರೊ.ನಿ.ಗಿರಿಗೌಡ, ಡಾ.ಮುನಿವೆಂಕಟಪ್ಪ, ಡಾ.ಮಂಗಳಮೂರ್ತಿ ಆಗಮಿಸಿದ್ದರು.







