878ನೇ ದಿನಕ್ಕೆ ಕಾಲಿಟ್ಟ ಕಳಸಾಬಂಡೂರಿ ಹೋರಾಟ

ಗದಗ, ಡಿ.9: ಗದಗದ ನರಗುಂದ ತಾಲೂಕಿನ ಕಳಸ ಬಂಡೂರಿ ಹೋರಾಟ 878 ದಿನಕ್ಕೆ ಮುಂದುವರಿದಿದೆ. ಮಹ ದಾಯಿ ನೀರು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ, ನರಗುಂದದಲ್ಲಿ ಮಹದಾಯಿ, ಕಳಸಾ-ಬಂಡೂರಿ ಹೋರಾಟ ಸಮಿತಿ ಕರೆ ನೀಡಿದ ನರಗುಂದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಬೆಳಗ್ಗೆಯಿಂದಲೇ ಪ್ರತಿಭಟನಾಕಾರರು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ-ವಿಜಯಪುರ ರಾಷ್ಟ್ರಿಯ ಹೆದ್ದಾರಿ ತಡೆದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಘೋಶನೆಗಳನ್ನು ಕೂಗಿದರು. ಅಲ್ಲದೆ, ಸ್ವಯಂ ಪ್ರೇರಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಅಂಗಡಿ ಮಾಲಕರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಮುಂಜಾಗ್ರತಾ ಕ್ರಮವಾಗಿ ನರಗುಂದ ತಾಲೂಕಿನಲ್ಲಿ ಸರಕಾರಿ ಬಸ್ ಸೌಲಭ್ಯ ಸಂಪೂರ್ಣ ಸ್ಥಗಿತ ಗೊಳಿಸಲಾಗಿತ್ತು. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹಲವು ದಿನದಿಂದ ಸಮಸ್ಯೆ ಇತ್ಯರ್ಥ ಮಾಡದೇ ಮಹದಾಯಿಯನ್ನು ವಿವಾದವಾಗಿಯೇ ಇರಿಸಿಕೊಂಡಿರುವ ಬಗ್ಗೆ ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತ ಪಡಿಸಿದರು. ತಿಂಗಳೊಳಗೆ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ ಮುಖಂಡರು ಸಮಸ್ಯೆ ಇತ್ಯರ್ಥ ಗೊಳಿಸದಿದ್ದಲ್ಲಿ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದರು. ಫಸಲ್ ಭೀಮಾ ಯೋಜನೆಯಲ್ಲಿ ರಾಜಕೀಯ ತಾರತಮ್ಯ, ನರೇಗಾ ಕೂಲಿ ಪಾವತಿಯಲ್ಲಿ ವಿಳಂಬ, ಮಲಪ್ರಭಾ ನದಿ ಜೋಡಣೆ ಯೋಜನೆ ದುರಸ್ತಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ರೈತರು ಆಗ್ರಹಿಸಿದರು.
ಪಟ್ಟಣದ ಪುರಸಭೆಯ ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಸರ್ವಜ್ಞ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತದ ವರೆಗೆ ನಡೆಯಿತು.







