ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಕುಶಾಲನಗರ ಬಂದ್
ಅಂಗಡಿ ಮುಂಗ್ಗಟ್ಟುಗಳು ಮುಚ್ಚಿ ಬಂದ್‌ಗೆ ಸಂಪೂರ್ಣ ಬೆಂಬಲ

ಕುಶಾಲನಗರ, ಡಿ. 9: ಕಾವೇರಿ ತಾಲೂಕು ರಚನೆಗೆ ಹಕ್ಕೊತ್ತಾಯ ಮಂಡಿಸಿ ಪ್ರಸ್ತಾವಿತ ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿ ಕರೆಕೊಟ್ಟಿದ್ದ ಕುಶಾಲನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
ಮೆಡಿಕಲ್‌ಗಳನ್ನು ಹೊರತು ಪಡಿಸಿ ಅಂಗಡಿ ಮಳಿಗೆಗಗಳು, ಹೋಟೇಲ್‌ಗಳು, ಸಿನಿಮಾ ಮಂದಿರಗಳು ಮುಚ್ಚುವ ಮುಲಕ ಬಂದಿಗೆ ಬೆಂಬಲ ಸೂಚಿಸಿದ್ದವು.
ಬೆಳಗ್ಗೆ ಆಟೋರಿಕ್ಷಾಗಳ ಹೋರಾಟ, ಖಾಸಗಿ ಬಸ್ಸುಗಳು, ಮಾಕ್ಸಿಕ್ಯಾಬ್, ಟಾಕ್ಸಿ ಸಂಚಾರ ಸ್ತಬ್ಧವಾಗಿದ್ದವು. ಸರಕಾರಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದವು. ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿತ್ತು.
ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ನ್ನು ತಡೆದು, ಗಂಟೆಗೊಮ್ಮೆ ವಾಹನಗಳನ್ನು ಬಿಡಲು ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದರು. ಸಮಿತಿಯ ತೀರ್ಮಾನಕ್ಕೆ ಪೋಲಿಸರು ಅವಕಾಶ ನೀಡದೇ, ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಪಟ್ಟಣದ ಟಾಟಾ ಪೆಟ್ರೋಲ್ ಬಂಕ್‌ನ ಬಳಿ ಸುಮಾರು ಒಂದು ತಾಸಿನ ವರೆಗೆ ರಸ್ತೆ ತಡೆಹಿಡಿದು ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿಯಲ್ಲಿಯೇ ಕುಳಿತ ಪ್ರತಿಭಟನಾಕಾರರು, ತಾಲೂಕು ರಚನೆಯ ಘೋಷಣೆಗಳನ್ನು ಕೂಗಿ ರಚನೆಯ ಅಗತ್ಯತೆಗಳನ್ನು ರಾಗಬದ್ಧವಾಗಿ ಹಾಡಿ ಗಮನ ಸೆಳೆದರು.
ನಂತರ ಮಧ್ಯಾಹ್ನದ ವೇಳೆ ಪಟ್ಟಣದ ಕಾರ್ಯಪ್ಪವೃತ್ತದ ಬಳಿ ಜಮಾಯಿಸಿದ ಪ್ರತಿಭಟ ನಾಕಾರರು, ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ಕಾವೇರಿ ತಾಲೂಕು ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕಾವೇರಿ ತಾಲೂಕಿಗಾಗಿ ಆಗ್ರಹಿಸಿ ಮೊದಲನೇ ಹಂತದ ಹೋರಾಟ ಮುಗಿದು, ಎರಡನೇ ಹಂತದ ಹೋರಾಟದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಪ್ರತಿಭಟನಾಕಾರರು ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಿ, ವಾಹನ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಬಂದನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಗುಡ್ಡೇಹೊಸುರು, 7ನೇ ಹೊಸಕೋಟೆ, ನಂಜರಾಯಪಟ್ಟಣ, ಕಂಬಿಬಾಣೆ, ಕೂಡಿಗೆ, ಹೆಬ್ಬಾಲೆ, ಶರಂಗಾಲ ಹಾಗೂ ಮುಂತಾದ ಕಡೆ ಬಂದ್‌ಗೆ ಬೆಂಬಲವನ್ನು ಸೂಚಿಸಿ ಪ್ರತಿಭಟನೆ ನಡೆಸಲಾಯಿತು. ವಾಹನ ಸಂಚಾರ ವಿರಳವಾಗಿತ್ತು. ಅಂಗಡಿ ಮುಂಡಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಹಲವೆಡೆ ರಸ್ತೆ ತಡೆ, ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಹೋಟೆಲ್‌ಗಳನ್ನು ಮುಚ್ಚಿದ್ದರಿಂದ ಕುಶಾಲನಗರಕ್ಕೆ ಆಗಿಮಿಸಿದ್ದ ಪ್ರವಾಸಿಗರು ಊಟ, ತಿಂಡಿಯಿಲ್ಲದೇ ಹೈರಾಣಾದ ಘಟನೆ ನಡೆಯಿತು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಮಂಜುಳಾ, ತಾಲೂಕು ಹೋರಾಟ ಸಮಿತಿಯ ಆರ್.ಕೆ.ನಾಗೇಂದ್ರಬಾಬು, ಅಬ್ದುಲ್ ಖಾದರ್, ಶರವಣಕುಮಾರ್, ಜಿ.ಎಲ್.ನಾಗರಾಜ್, ಮೋಹನ್‌ಕುಮಾರ್, ನಾರಾಯಣ, ಕೃಷ್ಣ, ನಾಗೇಶ್, ಮಹೇಶ್, ಚಂದನ್, ಮುಸ್ತಫಾ, ಝಕರಿಯಾ, ಅಕ್ಬರ್, ಕೆ.ಬಿ.ರಾಜು, ಕೀರ್ತಿರಾಜು, ದೀಪಕ್, ಶಿವಕುಮಾರ್ ಮತ್ತಿತರರು ಇದ್ದರು.
ಸೋಮವಾರಪೇಟೆ ಡಿವೈಎಸ್ಪಿ ಕೆ.ಮುರಳೀಧರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ವೃತ್ತನಿರೀಕ್ಷ ಖ್ಯಾತೇಗೌಡ, ನಗರ ಠಾಣಾಧಿಕಾರಿ ಪಿ.ಜಗದೀಶ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ ಹಾಗೂ ಸಿಬ್ಬಂದಿ ಪ್ರತಿಭಟನೆಯ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.







