ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಲಿದ್ದಾಳೆಯೇ ರಿಚಾ ಚಡ್ಡಾ ?
ಲೈಂಗಿಕ ಕಿರುಕುಳದ ಬಗ್ಗೆ ಹೇಳಿದರೆ ಬಾಲಿವುಡ್ ಗೆ ಹೀರೋಗಳೇ ಇರುವುದಿಲ್ಲ ಎಂದಿದ್ದಳು ಈಕೆ

ಹೊಸದಿಲ್ಲಿ, ಡಿ.9: ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಹೇಳಿರುವ ನಟಿ ರಿಚಾ ಚಡ್ಡಾ, “ನೀವು ನನ್ನ ಜೀವನಕ್ಕೆ ಪಿಂಚಣಿ ಕೊಡುವುದಾದರೆ, ನನ್ನ ಹಾಗು ಕುಟುಂಬದ ಸುರಕ್ಷತೆಯನ್ನು ಕಾಪಾಡುವುದಾದರೆ, ಚಿತ್ರಗಳು, ಟಿವಿ ಅಥವಾ ಇನ್ಯಾವುದರಲ್ಲಾದರೂ ಕೆಲಸ ಸಿಗಬಹುದು ಎಂದು ಭರವಸೆ ನೀಡುವುದಾದರೆ ನಾನು ಇಂತಹ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಬಲ್ಲೆ. ನಾನು ಮಾತ್ರವಲ್ಲ, ಲಕ್ಷಾಂತರ ಜನರು ಹೇಳಲಿದ್ದಾರೆ” ಎಂದಿದ್ದಾರೆ.
“ಈ ಬಗ್ಗೆ ಯಾರಾದರೂ ಮಾತನಾಡಿದರೆ ಪ್ರತಿ ಬಾರಿ ತೊಂದರೆಗೊಳಗಾಗುತ್ತಾರೆ. ಈ ಬಗ್ಗೆ ಮಾತನಾಡಿದಾಗ ಅಂತಹವರ ಹೆಸರುಗಳನ್ನು ಹೇಳಿ ಎಂದು ಜನರು ಹೇಳುತ್ತಾರೆ. ಇದನ್ನೆಲ್ಲಾ ಯಾರು ಮಾಡುತ್ತಿದ್ದಾರೆ ಎಂದು ಮಾಧ್ಯಮದವರಿಗೆ ಗೊತ್ತಿದ್ದರೆ ಯಾಕೆ ಬಹಿರಂಗಪಡಿಸಬಾರದು?. ನಾವು ಈ ಬಗ್ಗೆ ಮುಂದಾದಲ್ಲಿ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಚಿತ್ರರಂಗದ ವಾತಾವರಣ ಹಾಗು ಸ್ವರೂಪ ಬದಲಾಗಬೇಕಾಗಿದೆ” ಎಂದವರು ಹೇಳಿದ್ದಾರೆ.
ರಿಚಾ ಚಡ್ಡಾ ಹೇಳಿಕೆಯು ಬಾಲಿವುಡ್ ನಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದೆ. ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಹಾಗು ‘ಕಾಂಪ್ರಮೈಸ್’ನಂತಹ ಘಟನೆಗಳು ನಡೆಯುತ್ತವೆ ಎನ್ನುವುದು ಈ ಹಿಂದೆ ಹಲವು ಬಾರಿ ವರದಿಯಾಗಿತ್ತು. ಇದೇ ರೀತಿಯ ಹೇಳಿಕೆ ನೀಡಿದ್ದ ಚಡ್ಡಾ. ಲೈಂಗಿಕ ಕಿರುಕುಳದ ಬಗ್ಗೆ ಬಾಲಿವುಡ್ ಮಂದಿ ಬಾಯ್ಬಿಟ್ಟರೆ ನಾವು ಹಲವು ಹೀರೋಗಳನ್ನೇ ಕಳೆದುಕೊಳ್ಳಬೇಕಾದೀತು ಎಂದಿದ್ದರು.





