ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ : ಸಚಿವ ದೇಶಪಾಂಡೆ ಕಿಡಿ

ಹೊನ್ನಾವರ, ಡಿ.9: ಕೋಮು ಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಎಂಬವರ ಮೃತದೇಹ ಪತ್ತೆಯಾದ ಕುರಿತು ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುತ್ತಿರುವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಹೇಳಿಕೆಯನ್ನು ಖಂಡಿಸಿ, ಬೇಸರ ವ್ಯಕ್ತಪಡಿಸಿದರು.
ಜನ ಪ್ರಚೋದನೆಗೆ ಒಳಗಾಗುವಂತೆ ಸಾವಿನ ವಿಷಯದಲ್ಲಿ ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ಸಾವಿನ ವಿಷಯವನ್ನು ಪಕ್ಷಗಳಿಗೆ ಸೀಮಿತವಾಗಿ ನೋಡಬಾರದು. ಸಾವಿನ ಬಗ್ಗೆ ಮಾತನಾಡುವಾಗ ಸಾಮಾಜಿಕ ತಿಳುವಳಿಕೆ ಇರಬೇಕು ಎಂದು ಬಿಜೆಪಿಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿಸಮಗ್ರ ತನಿಖೆಗೆ ಪರಿಣಿತರ ತಂಡವನ್ನು ನೇಮಿಸಿದೆ. ವಿಧಿ ವಿಜ್ಞಾನ ತಜ್ಞರು ವರದಿ ನೀಡುವ ಮುನ್ನ ಅಸಂಬದ್ಧ ಹೇಳಿಕೆ ನೀಡುವುದು ಜವಾಬ್ದಾರಿಯುತ ನಾಯಕರಿಗೆ ಶೋಭೆ ತರುವಂತದಲ್ಲ ಎಂದು ಕಿಡಿಕಾರಿದರು.ಪೊಲೀಸರು ಸರಿಯಾಗಿ ಕರ್ತವ್ಯ ನಿಬಾಯಿಸಿದ್ದು, ಎಲ್ಲಿಯೂ ಕರ್ತವ್ಯ ಲೋಪ ಎದುರಾಗಿಲ್ಲ ಎಂದರು.
ಸುದ್ದಿಗೋಷ್ಠಿಯ ಬಳಿಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭ ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಇದ್ದರು.







