ಗುಜರಾತ್‌ನ ಗಜಡಿ ಗ್ರಾಮದಲ್ಲಿ ಶೂನ್ಯ ಮತದಾನ
ನೀರಿನ ಸಮಸ್ಯೆ: ಚುನಾವಣೆ ಬಹಿಷ್ಕಾರ

ಅಹ್ಮದಾಬಾದ್, ಡಿ.9: ನಗರವನ್ನು ಕಾಡುತ್ತಿರುವ ನೀರಿನ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ ಘಟನೆ ಗುಜರಾತ್‌ನ ಮೋರ್ಬಿ ಜಿಲ್ಲೆಯ ಗಜಡಿ ಗ್ರಾಮದಲ್ಲಿ ನಡೆದಿದೆ.
ಗುಜರಾತ್‌ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಮತಗಟ್ಟೆಗಳ ಮುಂಭಾಗ ಮತದಾರರ ಸರತಿಯ ಸಾಲು ಕಂಡುಬಂದರೆ, ಗಜಾಡಿ ಗ್ರಾಮದ ಮತಗಟ್ಟೆಯಲ್ಲಿ ನೋಂದಣಿಗೊಂಡಿದ್ದ 1,000 ಮತದಾರರಲ್ಲಿ ಯಾರೊಬ್ಬರೂ ಮತಗಟ್ಟೆಯತ್ತ ಸುಳಿಯಲೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ ಚಲಾಯಿಸುವಂತೆ ಗ್ರಾಮಸ್ಥರ ಮನ ಒಲಿಸಲು ನಡೆಸಿದ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಕೆಲ ತಿಂಗಳ ಹಿಂದೆಯೇ ಘೋಷಿಸಿದ್ದರು. ನೀರಿನ ಪೂರೈಕೆ ಸಮರ್ಪಕಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿತ್ತು. ಗ್ರಾಮಕ್ಕೆ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿದ್ದರೂ ಇನ್ನೊಂದು ಪೈಪ್‌ಲೈನ್ ಅಳವಡಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ ಎಂದು ಮೋರ್ಬಿ ಜಿಲ್ಲಾಧಿಕಾರಿ ಐ.ಕೆ.ಪಟೇಲ್ ತಿಳಿಸಿದ್ದಾರೆ. ಗ್ರಾಮಕ್ಕೆ ನೀರು ಪೂರೈಸಲು ಹೊಸ ಯೋಜನೆ ರೂಪಿಸಿರುವುದಾಗಿ ಗ್ರಾಮಸ್ಥರಿಗೆ ತಿಳಿಸಿದಾಗ, ಭರವಸೆಯನ್ನು ಲಿಖಿತವಾಗಿ ನೀಡುವಂತೆ ಒತ್ತಾಯಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ಮಾಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





