ಕಾವೇರಿ ತಾಲೂಕು ರಚನೆಗೆ ಆಗ್ರಹ : ಸುಂಟಿಕೊಪ್ಪದಲ್ಲಿ ಬಂದ್‌ಗೆ ಪೂರ್ಣ ಬೆಂಬಲ

ಸುಂಟಿಕೊಪ್ಪ, ಡಿ.9: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ವತಿಯಿಂದ ಕರೆಯಲಾಗಿದ್ದ ಬಂದ್‌ಗೆ ಸುಂಟಿಕೊಪ್ಪಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸ್ಥಾನೀಯ ಸಮಿತಿಗಳು ಪದಾಧಿಕಾರಿಗಳು ವ್ಯಾಪಾರ, ವಹಿವಾಟು, ವಾಣಿಜ್ಯ ಮಳಿಗೆಗಳು, ಉದ್ಯಮಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಸಂಪೂರ್ಣ ಬೆಂಬಲ ದೊರೆಯಿತು. ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಸುಂಟಿಕೊಪ್ಪಸ್ಥಾನೀಯ ಸಮಿತಿಯ ಅಧ್ಯಕ್ಷ ಪಿ.ಎಫ್. ಸೆಬಾಸ್ಟಿಯನ್, ಕೇಂದ್ರಿಯ ಸಮಿತಿಯ ಪದಾಧಿಕಾರಿಗಳು, ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಗೆ ಚಾಲನೆ ನೀಡಿದರು.
ಬೆಳಗ್ಗಿನಿಂದಲೇ ರಾಷ್ಟ್ರೀಯ ಹೆದ್ದಾರಿಗೆ ಇಳಿದು ಹೊರಜಿಲ್ಲೆಗಳಿಂದ ಕಾಫಿ ತೋಟಗಳಿಗೆ ಕಾರ್ಮಿಕ ರನ್ನು ಸಾಗಿಸುತ್ತಿದ್ದ ವಾಹನಗಳನ್ನು ತಡೆದು ತೋಟಗಳಿಗೆ ಕಾರ್ಮಿಕರನ್ನು ಕರೆದೊಯ್ಯದಂತೆ ತಡೆ ಹಿಡಿಯಲಾಯಿತು. ಪಟ್ಟಣದ ಎಲ್ಲ ವಾಣಿಜ್ಯ ಮಳಿಗೆಗಳು ಸಂಪೂರ್ಣವಾಗಿ ಮುಚ್ಚುವ ಮೂಲಕ ಸ್ವಯಂಪ್ರೇರಿತವಾಗಿ ಬಂದ್‌ಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗಾರ ವಾಹನಗಳ ಸಂಚಾರವು ಎಂದಿನಂತೆ ಸಂಚರಿಸುತ್ತಿದ್ದರೂ ಸುಂಟಿಕೊಪ್ಪಸ್ಥಾನೀಯ ಹಾಗೂ ಸಮಿತಿ ಕೇಂದ್ರೀಯ ಸಮಿತಿಯ ಪದಾಧಿಕಾರಿ ಗಳು ಅರ್ಧ ಗಂಟೆ ರಸ್ತೆಯಲ್ಲಿ ನೂರಾರು ವಾಹನಗಳನ್ನು ಸ್ಥಗಿತಗೊಳಿಸಿ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಖಾಸಗಿ ಶಾಲಾ ಕಾಲೇಜುಗಳು ಸ್ಥಗಿತಗೊಂಡಿದ್ದವು, ಸರಕಾರಿ ಶಾಲೆಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರವಿದ್ದರು. ಸುಂಟಿಕೊಪ್ಪಚೇಂಬರ್ ಆಫ್ ಕಾಮರ್ಸ್, ಕೊಡಗು ಜಿಲ್ಲಾ ಕಾರ್ಮಿಕ ಮತ್ತು ಚಾಲಕರ ಸಂಘ, ವಾಹನ ಚಾಲಕರ ಸಂಘ, ಆಟೊಚಾಲಕರ ಸಂಘ, ತಲೆಹೊರೆ ಕನ್ನಡಾಭಿಮಾನಿ ಸಂಘ, ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ, ಸೇರಿದಂತೆ ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಬಂದ್ ಯಶಸ್ವಿಗೆ ಕೈಜೋಡಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಎಂ.ಎ. ವಸಂತ ಹಾಗೂ ತಾಲೂಕು ಹೋರಾಟ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಪಿ.ಎಫ್. ಸೆಬಾಸ್ಟಿಯನ್, ತಾಲೂಕು ಹೋರಾಟ ಕೇಂದ್ರ ಸಮಿತಿಯ ಅಧ್ಯಕ್ಷ ವಿ.ಪಿ .ಶಶಿಧರ್, ತಾಪಂ ಸದಸ್ಯೆ ವಿಮಾಲಾವತಿ,ಗ್ರಾಪಂ ಅಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್,ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಕೇಂದ್ರಿಯ ಸಮಿತಿ ಸದಸ್ಯರಾದ ಕೆ.ಎ. ಉಸ್ಮಾನ್, ಡಿ.ನರಸಿಂಹ, ಕೆ.ಇ. ಕರೀಂ ಹಾಗೂ ಅಬ್ದುಲ್ ಹಕೀಂ ಮಾತನಾಡಿದರು.







