ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಸೊರಬ, ಡಿ. 10: ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ದಂಡಾವತಿ ನೀರಾವರಿ ನೀರಾವರಿ ಯೋಜನೆಗೆ ಶಂಕುಸ್ಥಾನೆ ನೆರವೇರಿಸಿದ್ದರು. ಆದರೆ ತಾವು ಹಾಗೂ ಹೋರಾಟಗಾರರ ಪ್ರಯತ್ನದಿಂದಾಗಿ ನೀರಾವರಿ ಯೋಜನೆ ಆಗಲು ಬಿಡಲಿಲ್ಲ ಎಂದು ಎಂದು ಶಾಸಕ ಮಧುಬಂಗಾರಪ್ಪ ತಿಳಿಸಿದರು. ತಾಲೂಕಿನ ಉಳವಿ ಹೋಬಳಿ ಕುಪ್ಪೆ ಗ್ರಾಮದಲ್ಲಿ ನಮ್ಮ ಗ್ರಾಮ-ನಮ್ಮರಸ್ತೆಯ ಹಂತ-4ರ ಯೋಜನೆಯಡಿಯಲ್ಲಿ ಕುಪ್ಪೆಯಿಂದ ಸೊರಬ-ಉಳವಿ ಮುಖ್ಯ ರಸ್ತೆವರೆಗಿನ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ದಂಡಾವತಿ ನೀರಾವರಿ ಯೋಜನೆ ಒಂದು ದುಂಡಾವರ್ತನೆಯ ದಂಡದ ಯೋಜನೆ ಆಗಿದ್ದು, ಯಾವ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡುವುದಿಲ್ಲ. ಈ ಹಿಂದೆ ನಮ್ಮ ಪಕ್ಷದಲ್ಲಿಯೇ ಇದ್ದುಕೊಂಡು ದಂಡಾವತಿ ಯೋಜನೆ ಮಾಡುವುದಿಲ್ಲ ಎಂದು ಮತ ಪಡೆದು ತಮ್ಮ ಪತ್ನಿಗೆ ತಾಲ್ಲೂಕು ಪಂಚಾಯ್ತಿ ಅದ್ಯಕ್ಷಗಿರಿಯನ್ನು ಗಿಟ್ಟಿಸಿಕೊಂಡವರು ಈಗ ಬಿಜೆಪಿ ಸೇರಿ ದಂಡಾವತಿ ಯೋಜನೆ ಪರವಾಗಿ ಮಾತನಾಡುತ್ತಿದ್ದರೆ ಎಂದು ನಿಸರಾಣಿ ಶ್ರೀಪಾದ ಹೆಗಡೆಯವರನ್ನು ಟೀಕಿಸಿದರು.
ಕುಮಾರ್‍ಬಂಗಾರಪ್ಪ ಜತೆ ಸೇರಿದ ಇಅವರು ದಂಡಾವತಿ ಯೋಜನೆಯನ್ನು ಮಾಡುತ್ತೇನೆ ಎಂದು ನೈತಿಕತೆ ಮತ್ತು ಬದ್ದತೆಯ ರಾಜಕಾರಣ ಇಲ್ಲದೆ ಮಾತನಾಡುತ್ತಿದ್ದಾರೆ ಎಂದರು. ನಾನು ಹಿಂದೆ ಈ ಭಾಗದಲ್ಲಿ ಕಾರ್ಯಕ್ರಮಗಳಿದ್ದಾಗ ಅದನ್ನು ಮುಗಿಸಿ ಹೆಗಡೆಯವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಸಾರ್ವಜನಿಕರು ನಾನಿರುವುದಕ್ಕಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಲ್ಲಿಗೆ ಬರುತ್ತಿದ್ದರು. ನಾನು ಇದ್ದರೂ ಕೂಡ ಸಾರ್ವಜನಿಕರಿಗೆ ಇಲ್ಲ ಎಂದು ಹೇಳಿ ಕಳುಹಿಸಿ, ಸಾರ್ವಜನಿಕರಿಂದ ನನ್ನನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದದನ್ನು ಮನಗಂಡ ನಾನು ಅವರಿಂದ ಕ್ರಮೇಣ ದೂರವಾದೆ. ರೈತರನ್ನು ಮುಳುಗಿಸುವ ಇವರು ಗ್ರಾಮಕ್ಕೆ ಬಂದರೆ ಜನರು ಸರಿಯಾದ ಉತ್ತರ ನೀಡಬೇಕು. ನಾನು ಶಾಸಕನಾದ ಮೇಲೆ ಪಕ್ಷಾತೀತವಾಗಿ ಸಾಮಾಜಿಕ ನ್ಯಾಯವನ್ನು ಜನರಿಗೆ ಒದಗಿಸಿದ್ದೇನೆ ಎಂಬ ತೃಪ್ತಿ ತಮಗಿದೆ. ಜನಸಂಖ್ಯೆ ಮತ್ತು ಮತಗಳನ್ನು ನೋಡಿ ಕಾಮಗಾರಿಯನ್ನು ಹಾಕಿಸಿಲ್ಲ. ಎಲ್ಲಿ ಅವಶ್ಯವಿದೆಯೋ ಅಲ್ಲಿ ಕಾಮಗಾರಿಯನ್ನು ಹಾಕಿದ್ದೇವೆ. ಇನ್ನೂ ನೂರಾರು ಕಾಮಗಾರಿಗಳು ಬಾಕಿ ಇದ್ದು ಅವುಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲಿದ್ದೇವೆ ಎಂದರು.
ಹೆಗ್ಗೋಡು ಗ್ರಾಪಂ ಸದಸ್ಯ ಜಗದೀಶ ಕುಪ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಗ್ಗೋಡು ಗ್ರಾಪಂ ಸದಸ್ಯ ಜಗದೀಶ ಕುಪ್ಪೆ, ಜಿಪಂ ಸದಸ್ಯೆ ತಾರಾ ಶಿವಾನಂದ, ತಾಪಂ ಸದಸ್ಯ ನಾಗರಾಜ ಎನ್.ಜಿ, ಎಪಿಎಂಸಿ ಸದಸ್ಯ ಕೆ. ಅಜ್ಜಪ್ಪ, ಪ್ರಕಾಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕಿ ಕವಿತಾ ಶಿವಕುಮಾರ್, ಗ್ರಾಮ ಸಮಿತಿ ಅದ್ಯಕ್ಷ ನಾಗರಾಜ್, ಮೋಹನ್, ಹೆಚ್. ಗಣಪತಿ, ಎಂ.ಡಿ ಶೇಖರ್, ಶಿಗ್ಗಾ ಗ್ರಾಪಂ ಉಪಾಧ್ಯಕ್ಷ ಪ್ರಭು, ಹೆಗ್ಗೋಡು ಗ್ರಾಪಂ ಉಪಾಧ್ಯಕ್ಷೆ ಮಮತಾ, ಸದಸ್ಯೆ ಸುವರ್ಣ, ರವಿ, ಕೃಷ್ಣಪ್ಪ ಓಟೂರು, ಸಂದೀಪ, ಜಯಶೀಲಗೌಡ, ಮಾವಲಿ ಗ್ರಾಪಂ ಅಧ್ಯಕ್ಷ ಶಿವಕುಮಾರ, ಜಯಶೀಲಗೌಡ್ರು ಮತ್ತಿತರರಿದ್ದರು.







