ಸ್ಕೂಟಿಗೆ ಟ್ರ್ಯಾಕ್ಟರ್ ಢಿಕ್ಕಿ: ಪತ್ನಿ ಸಾವು, ಪತಿಗೆ ಗಾಯ
ಶಿವಮೊಗ್ಗ, ಡಿ. 10: ವೇಗವಾಗಿ ಆಗಮಿಸಿದ ಟ್ರ್ಯಾಕ್ಟರ್‌ವೊಂದು ಟಿವಿಎಸ್ ಸ್ಕೂಟಿಯಲ್ಲಿ ತೆರಳುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟು, ಪತಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ನಡೆದಿದೆ.
ಗಣೇಶ ಕಾಲೋನಿಯ ನಿವಾಸಿಯಾದ ಪದ್ಮಿನಿ (63) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರ ಪತಿ ನಿವೃತ್ತ ವಿಐಎಸ್‌ಎಲ್ ನೌಕರ ಶಿವಕುಮಾರ್ (69) ರವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಟ್ರ್ಯಾಕ್ಟರ್ ಚಾಲಕನ ವಿರುದ್ದ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಕುಮಾರ್‌ರವರು ಪತ್ನಿಯನ್ನು ಟಿವಿಎಸ್ ಸ್ಕೂಟಿಯಲ್ಲಿ ಕೂರಿಸಿಕೊಂಡು ಬಿ.ಹೆಚ್. ರಸ್ತೆ ಮೂಲಕ ಹಳೇ ಸೇತುವೆ ಕಡೆ ತೆರಳುತ್ತಿದ್ದಾಗ, ಎದುರಿನಿಂದ ಆಗಮಿಸಿದ ಟ್ರ್ಯಾಕ್ಟರ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸ್ಕೂಟಿ ಸಮೇತ ದಂಪತಿ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಪದ್ಮಿನಿಯವರ ದೇಹದ ಮೇಲೆಯೇ ಟ್ರ್ಯಾಕ್ಟರ್ ಚಕ್ರ ಹರಿದು ಹೋಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.





