ಮುಂಡಗೋಡ: ಕಣ್ಮನ ಸೆಳೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ
ಸ್ಪರ್ಧೆಯಲ್ಲಿ ವಿವಿಧೆಡೆಯಿಂದ 300ಕ್ಕೂ ಹೆಚ್ಚು ಹೋರಿಗಳು ಭಾಗಿ
.jpg)
ಹೋರಿ ಹಿಡಿಯಲು ಯುವಕರ ಹರಸಾಹಸ
ಮುಂಡಗೋಡ, ಡಿ.10: ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ತಾಲೂಕಿನ ಇಂದೂರ ಗ್ರಾಮದಲ್ಲಿ ರವಿವಾರ ನಡೆಯಿತು. ಜಿಪಂ ಸದಸ್ಯ ರವಿಗೌಡ ಪಾಟೀಲ ಸ್ಪರ್ಧೆಗೆ ಚಾಲನೆ ನೀಡಿದರು.
ಮಲೆನಾಡಿನ ಸೊಗಡಿನಲ್ಲಿ ಅಡಕವಾಗಿರುವ ಹೋರಿ ಬೆದರಿಸುವ ಸ್ಪರ್ಧೆಯನ್ನು ಸಾಂಪ್ರದಾಯಿಕತೆಗೆ ಒತ್ತು ನೀಡಿ ಸಂಭ್ರಮದಿಂದ ಆಚರಿಸಲಾಯಿತು. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಗಳ ಮಾಲಕರು ಬಣ್ಣಬಣ್ಣದ ಹಗ್ಗ, ಕೊಂಬುಗಳಿಗೆ ವಿವಿಧ ಬಣ್ಣ, ನಾದಮಯ ಗೆಜ್ಜೆ, ಕೊಬ್ಬರಿ ಬಟ್ಟಲು, ಬಗೆಬಗೆಯ ರಿಬ್ಬನ್, ಜೂಲಾಗಳು ಬಲೂನ್ ಹಾಗೂ ಹೂಗಳಿಂದ ಅಲಂಕಾರ ಮಾಡಿಕೊಂಡು ಹೋರಿಗಳನ್ನು ಸ್ಪರ್ಧೆಗೆ ತಂದದ್ದು ನೋಡುಗರ ಕಣ್ಮನಸೆಳೆಯುವಂತಿತ್ತು. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಹೋರಿ ಗಳನ್ನು ಸ್ಪರ್ಧೆಯಲ್ಲಿ ಕಣಕ್ಕಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿರುವ ಹೋರಿಗಳನ್ನು ಹಿಡಿಯಲ್ಲೆಂದು ಸಾವಿರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ಕೆಲ ಹೋರಿಗಳನ್ನು ಹಿಡಿಯುವ ಮೂಲಕ ತಮ್ಮ ಶಕ್ತಿಯನ್ನು ತೋರಿಸಿದರು. ಅಲ್ಲದೆ, ಹೋರಿಗಳ ಮಾಲಕರು ಘೋಷಿಸಿದ್ದ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಅದರಂತೆ ಸಾವಿರಾರು ಜನರ ಮಧ್ಯೆ ಇನ್ನೂ ಕೆಲ ಹೋರಿಗಳು ಮೈಮುಟ್ಟಿಸಿಕೊಳ್ಳದೆ ವೇಗವಾಗಿ ಓಡುತ್ತಿರುವುದು ರೋಜಕವಾಗಿತ್ತು. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಗೆದ್ದ ಹೋರಿಗಳಿಗೆ ಸೂಕ್ತ ಬಹುಮಾನ ಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಬೇರೆಬೇರೆ ಜಿಲ್ಲೆಗಳಿಂದ ಸುಮಾರು 300ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು ಎಂದು ಸ್ಪರ್ಧೆ ಆಯೋಜಿಸಿದ್ದ ಸಂಘಟಕರು ತಿಳಿಸಿದ್ದಾರೆ.







