ಸ್ಪರ್ಧಾತ್ಮಕ ಬದುಕನ್ನು ಸವಾಲಾಗಿ ಸ್ವೀಕರಿಸಿ: ಡಿವೈಎಸ್ಪಿ ಸುಂದರ್‌ರಾಜ್

ಮಡಿಕೇರಿ, ಡಿ.10: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪೈಪೋಟಿಯ ಜೀವನದ ಸವಾಲು ಗಳನ್ನು ಎದುರಿಸುವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಪೊಲೀಸ್ ಉಪಅಧೀಕ್ಷಕ ಸುಂದರರಾಜ್ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದ 2016-17ನೇ ಸಾಲಿನ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ್ಪ ಮಾತನಾಡಿದರು. ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಾಗಿದ್ದು, ಈ ಸವಾಲುಗಳನ್ನು ಧೈರ್ಯವಾಗಿ ಎದುರಿ ಸಲು ವಿದ್ಯಾರ್ಥಿಗಳು ಮಾನಸಿಕ ತಯಾರಿಯನ್ನು ಮಾಡಿಕೊಳ್ಳಬೇಕು. ಪೋಷಕರು ಕೂಡ ತಮ್ಮ ಮಕ್ಕಳಿಗೆ ಶೈಕ್ಷಣಿಕ ಬೆಂಬಲವನ್ನು ನೀಡಿ ಉನ್ನತ ಮಟ್ಟದ ಹುದ್ದೆಗೇರಲು ಸ್ಫೂರ್ತಿ ತುಂಬಬೇಕೆಂದು ಸುಂದರ್‌ರಾಜ್ ಹೇಳಿದರು.
ನಗರಸಭಾ ಪೌರಾಯುಕ್ತೆ ಬಿ.ಶುಭಾ ಮಾತನಾಡಿ, ಪ್ರತಿಯೊಂದು ಸಂದರ್ಭದಲ್ಲೂ ಎಲ್ಲ ಸಮುದಾಯದ ಜನ ಒಂದಲ್ಲಾ ಒಂದು ರೀತಿಯಲ್ಲಿ ತುಳಿತಕ್ಕೆ ಒಳಗಾಗುತ್ತಾರೆ. ಈ ರೀತಿಯ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ಪ್ರತಿಯೊಬ್ಬರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದರು.
ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಡಾ. ಎಚ್. ವಿ. ದೇವದಾಸ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ಮಾತನಾಡಿದರು.
ರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿ ಎಚ್.ಎಸ್. ಗೋವಿಂದಸ್ವಾಮಿ, ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ದಾನಿಗಳಾದ ಟಿ.ಆರ್. ವಾಸುದೇವ್, ವ್ಯಾಂಡಮ್ ಎಂಟರ್‌ಪ್ರೈಸಸ್‌ನ ಮಾಲಕ ಕೆ.ಕೆ. ದಾಮೋದರ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಕೆಎಎಸ್ ಪದವಿ ಪಡೆದು ಉನ್ನತ ಅಧಿಕಾರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್ ಹಾಗೂ 2016-17ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ದಲಿತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
‘ಡಾ.ಅಂಬೇಡ್ಕರ್ ನಿರೀಕ್ಷೆ ಹುಸಿಯಾಗುತ್ತಿದೆ’
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಮುದಾಯದ ಭವಿಷ್ಯದ ದೃಷ್ಟಿಯಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಇಂದು ಡಾ.ಅಂಬೇಡ್ಕರ್ ನಿರೀಕ್ಷೆಗಳು ಹುಸಿಯಾಗುತ್ತಿದ್ದು, ದಲಿತ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ. ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮುದಾಯದ ಏಳಿಗೆಗಾಗಿ ಶ್ರಮಿಸಬೇ ಕಾಗಿದೆ ಎಂದು ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಡಾ. ವಿ.ಎಸ್. ಸತೀಶ್ ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ತಮ್ಮತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಪಾಂಡಿತ್ಯವನ್ನು ಹೊಂದಿ ದಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ದುಶ್ಚಟಳಿಗೆ ಬಲಿಯಾಗದೆ ಉನ್ನತ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡುವ ಗುರಿ ಹೊಂದಬೇಕೆಂದು ಡಾ.ಸತೀಶ್ ಹೇಳಿದರು.







