ಹಕ್ಕು, ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು: ನ್ಯಾ. ದೇವೇಂದ್ರನ್
ಚಿಕ್ಕಮಗಳೂರು: ವಿಶ್ವ ಮಾನವ ಹಕ್ಕುಗಳ ದಿನಾಚರಣೆ

ಚಿಕ್ಕಮಗಳೂರು, ಡಿ.10: ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು, ನಾವು ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಹಕ್ಕುಗಳನ್ನು ಚಲಾಯಿಸಲು ಹೆಚ್ಚು ಅರ್ಹರಾಗಿರುತ್ತೇವೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಡಿ.ಟಿ. ದೇವೇಂದ್ರನ್ ಹೇಳಿದ್ದಾರೆ.
ಅವರು ರವಿವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಹಾಗೂ ಹಿರಿಯರ ಹಗಲು ಯೋಗಕ್ಷೇಮ ಕೇಂದ್ರ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎರಡು ಮಹಾ ಯುದ್ಧಗಳ ಸಂದಭರ್ದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದ ಪರಿಣಾಮವಾಗಿ ಸಂಯುಕ್ತ ರಾಷ್ಟ್ರವು 1948 ಡಿ.10 ರಂದು ಸಭೆ ಸೇರಿ ವಿಶ್ವ ಮಾನವ ಹಕ್ಕುಗಳ ಅಸ್ಥಿತ್ವಕ್ಕೆ ಕಾರಣವಾಯಿತು. ನಾವೇ ಆಯ್ಕೆ ಮಾಡಿದ ವ್ಯಕ್ತಿಗಳಿಂದ ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಜಾಪ್ರುತ್ವದ ಕಲ್ಪನೆ ಅದ್ಭುತವಾದದ್ದು ಎಂದ ಅವರು, ಒಬ್ಬರು ಇನ್ನೊಬ್ಬರನ್ನು ಮಾನವೀಯ ದೃಷ್ಟಿಯಿಂದ ಕಂಡಾಗ ಮಾತ್ರ ಮಾನವ ಹಕ್ಕುಗಳಿಗೆ ಹೆಚ್ಚು ಮಾನ್ಯತೆ ದೊರೆಯುವುದರ ಜೊತೆಗೆ ಪ್ರಜಾಪ್ರಭುತ್ವದ ಕಲ್ಪನೆಯ ಸಾಕಾರ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎಚ್.ಸಿ. ನಟರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಜಿಲ್ಲೆಯಲ್ಲಿರುವ ಮಾನವ ಹಕ್ಕುಗಳ ಸಮಿತಿಗೆ ದೂರು ನೀಡುವಂತೆ ಹೇಳಿದರು. ಪೊಲೀಸರಿಗೆ ಸಂಬಂಧಿಸಿದ ದೂರುಗಳನ್ನು ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ. ಇವುಗಳಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಪಟ್ಟವುಗಳಾಗಿದ್ದರೆ ನಮ್ಮ ಸಮಿತಿಗೆ ವರ್ಗಾಯಿಸಲ್ಪಡುತ್ತವೆ. ಇತ್ತೀಚೆಗೆ ಪೊಲೀಸರಿಗೆ ಸಂಬಂಧಿಸಿದ ದೂರುಗಳೇ ಬರುತ್ತಿದ್ದರೂ ಕೂಡ ಶೇ.50ರಷ್ಟು ಕಡಿಮೆಯಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕುರಿತು ಮಾತನಾಡಿದ ಅವರು, ‘ಕಾನೂನಿನ ಉಚಿತ ಅರಿವು ನೆರವು’ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನ್ಯಾಯಾಧೀಶೆ ಶರ್ಮಿಳಾ ಸಿ. ಎಸ್. ಮಾತನಾಡಿ, ಮಗು ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಹಕ್ಕನ್ನು ಪಡೆದಿರುತ್ತದೆ ಎಂದ ಅವರು, ಹಕ್ಕುಗಳನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ಹಕ್ಕುಗಳನ್ನು ಚಲಾಯಿಸುವ ಮುನ್ನ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಉಪನ್ಯಾಸಕ ತಿಪ್ಪೇರುದ್ರಪ್ಪ‘ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು’ ಹಾಗೂ ಸರಕಾರಿ ಸಹಾಯಕ ಅಭಿಯೋಜಕ ರಾಘವೇಂದ್ರ ರಾಯ್ಕರ್ ಅವರು ‘ಪೊಲೀಸ್ ದೂರು ಪ್ರಾಧಿಕಾರದ ಅಸ್ಥಿತ್ವ ಮತ್ತು ಕಾರ್ಯಗಳು’ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ದುಷ್ಯಂತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಕೇಶವ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರ್ ಉಪಸ್ಥಿತರಿದ್ದರು.
ಮಾನವ ಹಕ್ಕನ್ನು ಸಮರ್ಥವಾಗಿ ಜಾರಿಗೆ ತರುವಲ್ಲಿ ವಿಫಲರಾಗುತ್ತಿದ್ದೇವೆ. ನಾನೂ ಬದುಕಬೇಕು ಇತರರನ್ನೂ ಬದುಕಲು ಬಿಡಬೇಕು. ಇದರ ತಳಹದಿಯ ಮೇಲೆ ಮಾನವ ಹಕ್ಕುಗಳು ಬರುತ್ತವೆ. ಪ್ರತಿಯೊಬ್ಬ ಮನುಷ್ಯ ತಾನು ಗರ್ಭಾವಸ್ಥೆಯಲ್ಲಿಂದ ಮರಣದವರೆಗೂ ಹಕ್ಕುಗಳನ್ನು ಹೊಂದಿರುತ್ತಾನೆ. ಪ್ರಸ್ತುತ ಮಹಿಳೆಯರ, ಮಕ್ಕಳ ಹಾಗೂ ವೃದ್ಧರ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ಕಂಡು ಬರುತ್ತಿದೆ.
ಎಚ್.ಸಿ. ನಟರಾಜ್‌ಅಧ್ಯಕ್ಷರು, ಜಿಲ್ಲಾ ಮಾನವ ಹಕ್ಕುಗಳ ಸಮಿತಿ.







