ಬಾಲಿವುಡ್ ನಟಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಡಿ.13ರವರೆಗೆ ಪೊಲೀಸ್ ಕಸ್ಟಡಿ
ಮುಂಬೈ,ಡಿ.10: ಬಾಲಿವುಡ್ ನಟಿಯೊಬ್ಬರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿ, ವಿಕಾಸ್ ಸಚ್ದೇವ್ನನ್ನು ಡಿಸೆಂಬರ್ 13ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕಾರ್ಪೊರೇಟ್ ಸಂಸ್ಥೆಯೊಂದರ ಉದ್ಯೋಗಿಯಾದ ವಿಕಾಸ್ ಸಚ್ದೇವ್, ವಿಮಾನದಲ್ಲಿ ನಟಿಯ ಹಿಂದೆ ಕುಳಿತುಕೊಂಡಿದ್ದ. ವಿಮಾನ ಪ್ರಯಾಣದ ವೇಳೆ ಆತ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದನೆನ್ನಲಾಗಿದೆ.
ಮುಂಬೈ ಪೊಲೀಸರು ರವಿವಾರ ನಟಿ ಪ್ರಯಾಣಿಸಿದ್ದ ಏರ್ವಿಸ್ತಾ ವಿಮಾನದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಚ್ದೇವ್ನನ್ನು ವಿಚಾರಣೆಗೊಳಪಡಿಸಿದ್ದರು. ಆನಂತರ ನಟಿಯು ಆತನನ್ನು ಗುರುತಿಸಿದ ಬಳಿಕ ಬಂಧಿಸಿದರು. ಭಾರತೀಯ ದಂಡಸಂಹಿತೆಯ 354ನೇ ಸೆಕ್ಷನ್ ಹಾಗೂ ಲೈಂಗಿಕ ಅಪರಾಧಗಳ (ಪೋಸ್ಕೊ) ಕಾಯ್ದೆ 2012ರ ವಿವಿಧ ಸೆಕ್ಷನ್ಗಳನ್ವಯ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ ಏರ್ವಿಸ್ತಾ ವಿಮಾನಯಾನ ಸಂಸ್ಥೆಯು ಹೇಳಿಕೆಯೊಂದನ್ನು ನೀಡಿ, ಪ್ರಕರಣಕ್ಕೆ ಸಂಬಂಧಿಸಿ ತಾನು ಪೊಲೀಸರಿಗೆ ನೆರವಾಗುತ್ತಿರುವುದಾಗಿ ತಿಳಿಸಿದೆ. ವಿಮಾನವು ವಿಮಾನನಿಲ್ದಾಣದಲ್ಲಿ ಇಳಿಯಲಾರಂಭಿಸಿದ ಹೊತ್ತಿಗಷ್ಟೇ ಅವರಿಗೆ ಏನೋ ಗೊಂದಲವುಂಟಾಗಿರುವುದು ಗಮನಕ್ಕೆ ಬಂದಿದ್ದಾಗಿ ಅದು ಸ್ಪಷ್ಟಪಡಿಸಿದೆ.