ದ.ಕ., ಉಡುಪಿ, ಶ್ರೀಲಂಕಾ ಜ್ಯೂನಿಯರ್ ಅಥ್ಲೆಟಿಕ್ ಮೀಟ್ ಉದ್ಘಾಟನೆ

ಮಂಗಳೂರು, ಡಿ.11: ದ.ಕ. ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ದ.ಕ., ಉಡುಪಿ ಮತ್ತು ಶ್ರೀಲಂಕಾ ಜ್ಯೂನಿಯರ್ ಅಥ್ಲೆಟಿಕ್ ಮೀಟ್ ಸೋಮವಾರ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಕ್ರೀಡೆಯಿಂದ ದೇಶ-ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಾಗುತ್ತದೆ. ಇದಕ್ಕೆ ಜಾತಿ-ಧರ್ಮ, ಭಾಷೆಯ ಹಂಗಿಲ್ಲ ಎಂದರು.
ಕ್ರೀಡೆಯಿಂದ ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವದೊಂದಿಗೆ ದಾಪುಗಾಲಿಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಖಾಸಗಿ-ಸರಕಾರಿ ವಲಯದಲ್ಲಿ ಔದ್ಯೋಗಿಕ ಮೀಸಲಾತಿಗಳಿರುವುದರಿಂದ ಅದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ನಳಿನ್ ಕುಮಾರ್ ಕಟೀಲ್ ನುಡಿದರು.
ಮೇಯರ್ ಕವಿತಾ ಸನಿಲ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ಚಂದ್ರಶೇಖರ್ ರೈ, ಮಾಜಿ ಅಂತಾರಾಷ್ಟ್ರೀಯ ಅಥ್ಲೆಟ್ ಉದಯ್ ಕೆ. ಪ್ರಭು, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್, ಶ್ರೀಲಂಕಾದ ಸಿಲೋನೀಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ಲಬ್‌ನ ಕಾರ್ಯದರ್ಶಿ ಡಿ. ಎ. ಯಾಸರೋಹನ ಡಿಸಿಲ್ವ ಗೌರವ ಅತಿಥಿಗಳಾಗಿದ್ದರು.
ಡಿಕೆಎಎ ಅಧ್ಯಕ್ಷ ಮಂಜುನಾಥ ಭಂಡಾರಿ, ಕಾರ್ಯದರ್ಶಿ ತಾರನಾಥ ಶೆಟ್ಟಿ ಎ. ಉಪಸ್ಥಿತರಿದ್ದರು.





