ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷ ನಿರ್ಣಾಯಕ ಪಾತ್ರ: ಪದ್ಮನಾಭ ಪ್ರಸನ್ನ ಕುಮಾರ್
ಮೈಸೂರು,ಡಿ.11: ಮುಂಬರುವ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷ ನಿರ್ಣಯಕ ಪಾತ್ರ ವಹಿಸಲಿದ್ದು. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಕೆಜೆಪಿ ಸಂಸ್ಥಾಪಕ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು. ಚಾಮರಾಜನಗರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತಿದ್ದು. ಮುಂದಿನ ವಾರ ನಗರದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ ವಾರ್ಡ್ ಮಟ್ಟದಿಂದ ಜನ ಜಾಗೃತಿಗೊಳಿಸಲಾಗುವುದು ಎಂದು ತಿಳಿಸಿದರು.
ಬಿಎಸ್ ವೈ ಬಗ್ಗೆಯಿರುವ ಸಿಡಿ ಬಿಡುಗಡೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಬಿ ಎಸ್ ವೈ ಅವರ ಮದುವೆ ಸಿಡಿ ಕುರಿತು ಸಿಎಂ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ, ಹೀಗಾಗಿ ಸಿಡಿ ವಿಚಾರ ಪ್ರಸ್ತಾಪ ಮಾಡೋದಿಲ್ಲ, ಏನಿದ್ದರೂ ಮುಂದಿನ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಮೂಡಿದೆ. ಗೆಲುವಿಗಾಗಿ ವಾಮ ಮಾರ್ಗವನ್ನು ಅನುಸರಿಸುವ ಚಿಂತನೆಯಲ್ಲಿ ಕೂಡಿವೆ ಎಂದರಲ್ಲದೇ, ನಾಡು ನುಡಿಗಾಗಿ ಹೋರಾಡುವ ನಿರ್ಣಯವನ್ನು ಕೆಜೆಪಿ ಪಕ್ಷವೂ ಹೊಂದಿದ್ದು. ಈಗಾಗಲೇ ಹಾವೇರಿ ಮತ್ತು ಹಿರೇಕೆರೂರಿನಲ್ಲಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಹಿರೇಕೆರೂರಿನಲ್ಲಿ ಸ್ವತಃ ತಾವೇ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಪಕ್ಷವು ಕಳೆದ ಚುನಾವಣೆಯಲ್ಲಿ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲಿ ಕೆಲವೇ ಮತಗಳ ಅಂತರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತ್ತಿದ್ದರು. ಆದ್ದರಿಂದ ಪಕ್ಷವು ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಚುನಾವಣೆಯಲ್ಲಿ ಮುನ್ನಡೆಯಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಪಂಡಿತ್, ಮೈಸೂರು ಉಸ್ತುವಾರಿ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಸಂತೋಷ್, ಮೊದಲಾದವರು ಹಾಜರಿದ್ದರು.







