ನಾಟೆಕಲ್: ಗಾಂಜಾ ಸಾಗಾಟದ ಆರೋಪಿ ಖುಲಾಸೆ
ಮಂಗಳೂರು, ಡಿ.12: ದೇರಳಕಟ್ಟೆ ಸಮೀಪದ ನಾಟೆಕಲ್ ಕ್ರಾಸ್ ಬಳಿ ಕಾರಿನಲ್ಲಿ ಗಾಂಜಾ ಸಾಗಾಟ ಪ್ರಕರಣದ ಆರೋಪಿಯಾಗಿದ್ದ ನವಾಝ್ ಎಂಬಾತ ನನ್ನು ದ.ಕ. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಕೊಣಾಜೆಯಿಂದ ದೇರಳಕಟ್ಟೆ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ನಗರ ಸಿಸಿಬಿ ಇನ್‌ಸ್ಪೆಕ್ಟರ್ ಸುನೀಲ್ ನಾಯ್ಕೆ ನೇತೃತ್ವದ ತಂಡ ಮಂಜನಾಡಿ ನಾಟೆಕಲ್ ಕ್ರಾಸ್ ಬಳಿ ಆರೋಪಿಯನ್ನು ಬಂಧಿಸಿತ್ತು.
ಈ ಸಂದರ್ಭ ಆರೋಪಿಯನ್ನು ವಿಚಾರಣೆ ನಡೆಸಿದಾಗ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾವನ್ನು ತಂದು ಕಾಸರಗೋಡಿನ ಉಪ್ಪಳಕ್ಕೆ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬೀಳಗಿ, ಸದ್ರಿ ಪ್ರಕರಣವನ್ನು ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯ ಕ್ರಮಗಳನ್ನು ಸರಿಯಾಗಿ ಅನುಸರಿಸಿಲ್ಲ. ಅಭಿಯೋಜಕರು ಪ್ರಕರಣ ಸಾಬೀತುಪಡಿಸಲು ವಿಲರಾಗಿದ್ದಾರೆಂದು ನಿರ್ಧರಿಸಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.
ಆರೋಪಿ ಪರ ವೇಣುಕುಮಾರ್, ಯುವರಾಜ್, ಕೆ. ಅಮೀನ್, ಜಗದೀಶ್ ವಾದಿಸಿದ್ದರು.







