ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಸಂಪುಟ ಅಸ್ತು
ಬೆಂಗಳೂರು, ಡಿ. 11: ನಮ್ಮ ಮೆಟ್ರೋ ಯೋಜನೆಯನ್ನು ನಗರದ ನಾಗವಾರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತರಿಸುವ 5,950ಕೋಟಿ ರೂ.ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸೋಮವಾರ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ನಿಯಮಿತದ ಸೌಲಭ್ಯ ಶುಲ್ಕದಲ್ಲಿ 1 ಸಾವಿರ ಕೋಟಿ ರೂ., ರಾಜ್ಯ ಸರಕಾರ 1,350 ಕೋಟಿ ರೂ., ಸರಕು ಮತ್ತು ಸೇವಾ ತೆರಿಗೆಯ ಮರುಪಾವತಿಯಲ್ಲಿ ದೊರೆಯುವ 250ಕೋಟಿ ರೂ., ಮೆಟ್ರೋ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಒದಗಿಸುವ 500 ಕೋಟಿ ರೂ. ಹಾಗೂ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಲಾಗುವುದು ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದರು.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಗಡೆನಗರ, ಜಕ್ಕೂರು, ಯಲಹಂಕ ಕೋಗಿಲು ಕ್ರಾಸ್ ಹಾಗೂ ಚಿಕ್ಕಜಾಲ ಒಳಗೊಂಡಂತೆ ಏಳು ನಿಲ್ದಾಣಗಳುಳ್ಳ 29.62 ಕಿ.ಮೀ ಉದ್ದದ ಈ ಮಾರ್ಗ 2021ರೊಳಗೆ ಪೂರ್ಣಗೊಳಿಸಲು ಮುಂದಿನ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿರಿಸಲು ಸಂಪುಟ ನಿರ್ಧರಿಸಿದೆ. ಉದ್ದೇಶಿತ ಈ ಯೋಜನೆ ಸಾಕಾರಗೊಂಡಲ್ಲಿ ಪ್ರತಿದಿನ ಈ ಮಾರ್ಗದಲ್ಲಿ 1.2ಲಕ್ಷ ಜನರು ಪ್ರಯಾಣಿಸುತ್ತಾರೆಂದು ಅಂದಾಜಿಸಲಾಗಿದೆ ಎಂದರು





