ಜನವರಿಯಲ್ಲಿ ಜಿಲ್ಲಾ ಜೆಡಿಎಸ್ ಸಮಾವೇಶ: ಪ್ರಚಾರಾರ್ಥ ಬೈಕ್ ರ್ಯಾಲಿ-ಉತ್ತಮನ್ ಪಿಳ್ಳೆ
ಪುತ್ತೂರು, 11: ಮುಂದಿನ ಜನವರಿ ತಿಂಗಳ ಎರಡನೇ ವಾರದಲ್ಲಿ ಮಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು, ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ಸೋಮವಾರದಿಂದ ಪ್ರಚಾರಾರ್ಥ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉತ್ತಮನ್ ಪಿಳ್ಳೆ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇ ಗೌಡ , ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮತ್ತಿತರರ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರತೀ ಬೂತ್ ಮಟ್ಟದಿಂದ ಕನಿಷ್ಠ 20 ಕಾರ್ಯಕರ್ತರನ್ನು ಸಮಾವೇಶಕ್ಕೆ ಬರುವಂತೆ ಮಾಡಲಾಗುವುದು. ಜಿಲ್ಲೆಯ ರಬ್ಬರ್ ಬೆಳೆಗಾರರು ಧಾರಣೆ ಇಲ್ಲದೆ ಕಂಗಾಲಾಗಿದ್ದು, ಈ ಕುರಿತು ಮಾಜಿ ಪ್ರಧಾನಿ ದೇವೇ ಗೌಡ ಅವರಿಗೆ ಮನವಿ ಅರ್ಪಿಸುವ ಜೊತೆಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುವಂತೆ ಸಮಾವೇಶ ಸಂದರ್ಭದಲ್ಲಿ ಅವರಲ್ಲಿ ವಿನಂತಿಸಲಾಗುವುದು ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದಿಂದಾಗಿ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದು, ತಮ್ಮ ಆಡಳಿತದ ವೇಳೆ ಕ್ರಾಂತಿಕಾರಿ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡಿದ್ದ ಜೆಡಿಎಸ್ ಪಕ್ಷದತ್ತ ಜನತೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವಿಧಾನಸಭಾ ಚಿನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಆಡಳಿತಕ್ಕೆ ಬರುವುದು ಸ್ಪಷ್ಟವಾಗಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದರು.
ಕಳೆದ ಆಗಸ್ಟ್ ತಿಂಗಳಿಂನಿಂದ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಸದಸ್ಯತನ ಅಭಿಯಾನ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈ ತನಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಸೇರಿದಂತೆ 15 ಸಾವಿರ ಸದಸ್ಯರ ಸೇರ್ಪಡೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.87ರಷ್ಟು ಬೂತ್ ಕಮಿಟಿಗಳ ರಚನೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಐ.ಸಿ.ಕೈಲಾಸ್ ಕೆದಂಬಾಡಿ, ಕ್ಷೇತ್ರ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಪಳ್ಳತ್ತೂರು,ಕಡಬ ತಾಲೂಕು ಸಮಿತಿಯ ಅಧ್ಯಕ್ಷ ಮುತ್ತಪ್ಪ ಮುಗೇರ,ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಅದ್ದು ಪಡೀಲು, ನಗರ ಸಮಿತಿಯ ಕಾರ್ಯದರ್ಶಿ ವಿಕ್ಟರ್ ಗೋನ್ಸಾಲ್ವೀಸ್ ಉಪಸ್ಥಿತರಿದ್ದರು.







