‘ಸಣ್ಣ ಪರೀಕ್ಷೆ ಅಷ್ಟೆ, ಗೆದ್ದು ಬರುವ ನಂಬಿಕೆ ಇದೆ’ : ರವಿಬೆಳಗೆರೆ ಪತ್ನಿ ಯಶೋಮತಿ

ರವಿ ಬೆಳಗೆರೆ
ಬೆಂಗಳೂರು, ಡಿ.11: ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನವಾಗಿರುವ ‘ಹಾಯ್ ಬೆಂಗಳೂರು’ ಸಂಸ್ಥಾಪಕ ರವಿಬೆಳಗೆರೆ ಅವರ ಎರಡನೆ ಪತ್ನಿ ಯಶೋಮತಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ಇದೆ’ ಎಂದಿದ್ದಾರೆ.
ಸೋಮವಾರ ತಮ್ಮ ಫೇಸ್ಬುಕ್ ಪುಟದಲ್ಲಿ ರವಿಬೆಳಗೆರೆ ಬಂಧನ ಕುರಿತು ಬರೆದುಕೊಂಡಿರುವ ಯಶೋಮತಿ ಸಾರಂಗಿ, ಅನುಮಾನಗಳು, ಅವಮಾನಗಳು, ಆರೋಪಗಳು ಬೆನ್ನ ಹಿಂದೆ ನೆರಳಿನಂತೆ ನಡೆದು ಬರುತ್ತಲೇ ಇವೆ. ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ಸೇಡಿಗೆ ಇಳಿದಿವೆ.ಕೆಲವರಿಗೆ ಮನರಂಜನೆ, ಕೆಲವರಿಗೆ ಆತಂಕ. ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಅನುಮಾನ. ಏನೂ ಯೋಚನೆ ಮಾಡಬೇಡ ನಂಗೇನೂ ಆಗಲ್ಲ ಅಂತ ಚೆಲ್ಲಿ ಹೋದ ರವಿಯ ನಗುವೇ ಮನೆ ಮನ ತುಂಬಿದೆ. ಅದೇ ನಿರೀಕ್ಷೆಯಲ್ಲಿದ್ದೇವೆ ನಾನು, ಪುತ್ರ. ನಿಮಗೇನೂ ಆಗಲ್ಲ ರವಿ. ನಮ್ಮೆಲ್ಲರ ಪ್ರಾರ್ಥನೆ ಸದಾ ನಿಮ್ಮಾಂದಿಗಿದೆ. ಇದೊಂದು ಸಣ್ಣ ಪರೀಕ್ಷೆ ಅಷ್ಟೆ. ಅದರಲ್ಲಿ ಗೆದ್ದು ಬರುವಿರೆಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
‘ನಿಖರವಾದ ಮಾಹಿತಿಯಿಲ್ಲದೆ ಟಿವಿ ಮಾಧ್ಯಮಗಳು ತಮಗೆ ಬೇಕಾದ ಬಣ್ಣ ತುಂಬಿ ಒಂದು ರೀತಿಯ ಸೇಡಿಗೆ ಇಳಿದಿವೆ’.
-ಯಶೋಮತಿ, ರವಿಬೆಳಗೆರೆ ಪತ್ನಿ





