ಕನ್ನಡಿಗರೇ ಭಾಷಾ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಬಂದಿದೆ : ವಿನಯ್ ರಾಮಕೃಷ್ಣ ಆತಂಕ
ಮದ್ದೂರು, ಡಿ.11: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡಿಗರು ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಒದಗಿದೆ ಎಂದು ಆರ್.ಕೆ.ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಸಮೀಪದ ಸೋಮನಹಳ್ಳಿ ಐಟಿಐ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಸಂಘವು ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ನಮ್ಮ ನೆಲ, ನೀರು ಬಳಸಿಕೊಂಡು ಕನ್ನಡ ಕಲಿಕೆಯತ್ತ ಅನಾಸಕ್ತಿ ಪ್ರದರ್ಶಿಸಲಾಗುತ್ತಿದೆ. ಹೀಗಾಗಿ ಕನ್ನಡಿಗರು ಜಾಗೃತರಾಗಬೇಕಿದೆ. ಅನ್ಯಭಾಷಿಗರಿಗೆ ಕನ್ನಡ ಕಲಿಸುವತ್ತ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಅವರು ಕರೆ ನೀಡಿದರು.
ಮಹಿಳಾ ಸರಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಪಕ ಡಾ.ಚಂದ್ರು ಪ್ರಧಾನ ಭಾಷಣ ಮಾಡುತ್ತಾ, ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದೂಗೂಡಿಸಿದ ಮಹತ್ವದ ದಿನವಿದು. ಕನ್ನಡಿಗರು ತಮ್ಮಲ್ಲಿನ ಕೀಳರಿಮೆ ಮರೆತು ಕನ್ನಡ ನಾಡುನುಡಿಯ ಬಗೆಗೆ ಅಭಿಮಾನ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಪ್ರಕಾಶ್‍ಬಾಬು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸತೀಶ್ ಧ್ವಜಾರೋಹಣ ನೆರವೇರಿಸಿದರು. ತರಬೇತಿ ಅಧಿಕಾರಿ ಪ್ರಭು, ಎನ್‍ಎಸ್‍ಎಸ್ ಅಧಿಕಾರಿ ಚನ್ನಂಕೇಗೌಡ, ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಲಾರಾ ಪ್ರಸನ್ನ, ಇತರ ಗಣ್ಯರಿದ್ದರು.







