ತಲಪಾಡಿ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ, ಡಿ.೧೩: ನಾವು ಕೆಲಸದ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗದ ಕಾರಣ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಪುರಸಭಾ ಸದಸ್ಯೆ ಮುಮ್ತಾಝ್ ಬಿ.ಸಿ.ಲತೀಫ್ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ತಲಪಾಡಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈನಂದಿನ ಚಟುವಟಿಕೆಯೊಂದಿಗೆ ವ್ಯಾಯಾಮ ಹಾಗೂ ಇನ್ನಿತರ ಆರೋಗ್ಯಕರ ಟಿಪ್ಸ್‌ಗಳನ್ನು ಜೀವನದಲ್ಲಿ ಅಭ್ಯಾಸವಾಗಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮುಸ್ತಾಕ್, ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆ ತೆಗೆದು ಕೊಳ್ಳುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಗ್ರಾಮೀಣ ಭಾಗದಲ್ಲಿ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಜಯಮಾಲಾ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಬಿ.ಸಿ.ಲತೀಫ್ ತಲಪಾಡಿ ಸ್ವಾಗತಿಸಿ, ನಿರೂಪಿಸಿದರು. ಸುಮಾರು ನೂರಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿ, ಸದುಪಯೋಗ ಪಡೆದುಕೊಂಡರು.







