ಅಫ್ಘಾನ್ ಸೇನೆಯ 20 ಮಹಿಳಾ ಅಧಿಕಾರಿಗಳಿಗೆ ತರಬೇತಿ ನೀಡಲಿರುವ ಭಾರತೀಯ ಸೇನೆ
.jpg)
ಹೊಸದಿಲ್ಲಿ, ಡಿ.13: ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನದ ಸೇನೆಯ 20 ಮಹಿಳಾ ಅಧಿಕಾರಿಗಳು ಚೆನ್ನೈಯಲ್ಲಿರುವ ಭಾರತೀಯ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಸೇನಾ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
21 ದಿನಗಳ ಈ ತರಬೇತಿ ಕಾರ್ಯಕ್ರಮವು ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ ಭಾರತದ ಬದ್ಧತೆಯ ಭಾಗವಾಗಿದೆ. ತರಬೇತಿಯ ಸಮಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಎರೋಬಿಕ್ಸ್, ದೈಹಿಕ ಮತ್ತು ಮಾನಸಿಕ ತರಬೇತಿ, ಯುದ್ಧತಂತ್ರ, ಅಡೆತಡೆಗಳ ಬಗ್ಗೆ ತರಬೇತಿ, ಗುಂಡು ಹಾರಾಟ, ಮ್ಯಾಪ್ ಓದುವಿಕೆ ಮತ್ತು ಸಿಮ್ಯುಲೆಟರ್ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಅಫ್ಘಾನಿಸ್ತಾನದ ಅಧ್ಯಕ್ಷ ಯೂಸುಫ್ ರಝಾ ಘನಿ ಅಫ್ಘಾನಿಸ್ತಾನದಲ್ಲಿ ಪ್ರಾದೇಶಿಕ ಸ್ಥಿರತೆ ಕಾಪಾಡುವಲ್ಲಿ ಭಾರತದ ಬೆಂಬಲವನ್ನು ಪುನರುಚ್ಛರಿಸಿದ್ದರು.
ವರದಿಗಳ ಪ್ರಕಾರ ಭಾರತಕ್ಕಾಗಮಿಸಿದ ಮಹಿಳಾ ಅಧಿಕಾರಿಗಳಿಗೆ ಮೊದಲ ದಿನ ಚೆನ್ನೈ ದರ್ಶನ ಮಾಡಿಸಲಾಯಿತು. ಈ ಮಹಿಳಾ ಅಧಿಕಾರಿಗಳಲ್ಲಿ ಹೆಚ್ಚಿನವರು ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಸಿನೆಮಾಗಳ ಅಭಿಮಾನಿಗಳು ಎಂದು ವರದಿ ತಿಳಿಸಿದೆ.







