ಪ್ರತಾಪ್ ಸಿಂಹ ಹೇಳಿಕೆಗೂ ನಮಗೂ ಸಂಬಂಧವಿಲ್ಲ : ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಡಿ. 13: ಅಮಿತ್ ಷಾ ಸೂಚನೆಯಂತೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಪಕ್ಷದ ಮುಖಂಡರು ಅಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಹೊನ್ನಾವರದ ಪರೇಶ ಮೇಸ್ತಾ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ಆಗ್ರಹಿಸಿ ಡಿ.15ರಂಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಶ ಮೇಸ್ತಾ ನಿಗೂಢ ಸಾವು ಪ್ರಕರಣದ ಮರಣೋತ್ತರ ಪರೀಕ್ಷಾ ವರಿದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರು ನಿರ್ಭೀತಿಯಿಂದ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮೇಸ್ತಾ ಪ್ರಕರಣವನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಸಣ್ಣ ಪ್ರಕರಣ ಎಂಬ ಹೇಳಿಕೆ ಸಲ್ಲ. ಈ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದ ಅವರು, ಮೇಸ್ತಾ ಪ್ರಕರಣ ಖಂಡಿಸಿ ಡಿ.18ಕ್ಕೆ ಹೊನ್ನಾವರದಲ್ಲಿ ಪ್ರತಿಭಟನೆಗೆ ಅನುಮತಿ ಕೋರುತ್ತೇವೆ. ಪೊಲೀಸರು ಅನುಮತಿ ನೀಡಿದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
‘ಸಿದ್ದರಾಮಯ್ಯರ ‘ಸಾಧನಾ ಸಂಭ್ರಮ’ ಪ್ರವಾಸ ಕಾಂಗ್ರೆಸ್ ಪಕ್ಷದ ವಿನಾಶದ ಪ್ರವಾಸವಾಗಲಿದೆ. ಯಾವ ಸಂಭ್ರಮಕ್ಕೆ ಸಂತಸ ಪಡೋದು. ಸರಕಾರ ರಾಜ್ಯದ ಅಭಿವೃದ್ಧಿ ಮಾಡಿಲ್ಲ. ಇದು ಸಿದ್ದರಾಮಯ್ಯರ ಸಂಭ್ರಮ ಅಷ್ಟೇ. ಎಲ್ಲೆಲ್ಲಿ ಗೆದ್ದಿದ್ದಾರೋ ಅಲ್ಲಿಗೆ ಸಿಎಂ ಹೋಗುತ್ತಿದ್ದಾರೆ. ಗೆದ್ದರೆ ಸಿದ್ದರಾಮಯ್ಯ, ಸೋತರೆ ಪರಮೇಶ್ವರ್’
-ಶೋಭಾ ಕರಂದ್ಲಾಜೆ ಸಂಸದೆ







