ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಪಿಎಫ್‌ಐ ಖಂಡನೆ
ಮಂಗಳೂರು, ಡಿ.14: ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯು ಸಾವಿನ ಮನೆಯಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಖಂಡಿಸಿದ್ದಾರೆ.
ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಂಕರ್ ಎಂ. ಜಕ್ಕನ್ನವರ ಅವರು ಹೊನ್ನಾವರ ಪೊಲೀಸರಿಗೆ ನೀಡಿರುವ ಮರಣೋತ್ತರ ವರದಿಯ ಪ್ರಕಾರ ಆಯುಧದಿಂದ ಹಲ್ಲೆ ನಡೆಸಿದ ಗುರುತಾಗಲಿ ಅಥವಾ ಉಸಿರುಗಟ್ಟಿಸಿ ಸಾಯಿಸಿರುವ ಲಕ್ಷಣಗಳಾಗಲಿ ಪರೇಶ್ ಮೇಸ್ತ ಮೃತದೇಹದಲ್ಲಿ ಕಂಡುಬಂದಿಲ್ಲ ಮತ್ತು ಇದೊಂದು ಸಹಜ ಸಾವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಈ ಸಾವಿನ ಬಗ್ಗೆ ಹೆಚ್ಚಿನ ತನಿಖೆ ಇನ್ನಷ್ಟೇ ಪ್ರಗತಿಯಲ್ಲಿರುವಾಗ ಬಿಜೆಪಿಗರು ಸಾವಿನ ಹೆಸರಿನಲ್ಲಿ ಸಮಾಜಕ್ಕೆ ಬೆಂಕಿ ಹೊತ್ತಿಸಿ ಅದರಿಂದ ತನ್ನ ರಾಜಕೀಯ ಬೇಳೆ ಬೇಯಿಸಲು ಹೊರಟಿರುವುದು ಅಕ್ಷಮ್ಯ. ಬಿಜೆಪಿ ಮತ್ತು ಸಂಘಪರಿವಾರ ಕುಮಟಾದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಮತ್ತು ನಂತರ ನಡೆದ ಗಲಭೆ ಪೂರ್ವನಿಯೋಜಿತವಾಗಿತ್ತು ಎಂದು ಅವರು ಆರೋಪಿಸಿದರು.
ಈ ಘಟನೆಗೆ ಸರಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ. ಹೊನ್ನಾವರ ಮತ್ತು ಆಸುಪಾಸಿನ ಜನರು ಶಾಂತಿಯನ್ನು ಕಾಪಾಡಬೇಕು. ಹೊನ್ನಾವರ ಸಹಜ ಸ್ಥಿತಿಗೆ ಮರಳಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಮತ್ತು ಗಲಭೆಗೆ ಪ್ರಚೋದನೆ ನೀಡಿದ ಹಾಗೂ ಗಲಭೆ ನಡೆಸಿದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಒತ್ತಾಯಿಸಿದ್ದಾರೆ.





