ಗುಜರಾತ್ ಚುನಾವಣೆ: ಶೇಕಡಾ 68 ಮತದಾನ

ಅಹ್ಮದಾಬಾದ್, ಡಿ.14: ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನ ಗುರುವಾರ ನಡೆದಿದ್ದು ಶೇಕಡಾ 68.7 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಪ್ರಮಾಣವು ಮೊದಲ ಹಂತದ ಪ್ರಮಾಣದಿಂದ ಸ್ವಲ್ಪವೇ ಹೆಚ್ಚಾಗಿದೆ. ಗುಜರಾತ್‌ನ ಮೊದಲ ಹಂತದ ಮತದಾನದಲ್ಲಿ ಶೇಕಡಾ 68 ಮತದಾನವಾಗಿತ್ತು. 2012ರಲ್ಲಿ ಶೇಕಡಾ 71.3 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು.
ಅಹ್ಮದಾಬಾದ್‌ನಲ್ಲಿ ತಮ್ಮ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ ಶಾಯಿ ಗುರುತು ಹಾಕಲಾಗಿರುವ ತಮ್ಮ ಕೈಬೆರಳನ್ನು ಎತ್ತಿ ನೆರೆದಿದ್ದ ಜನರಿಗೆ ತೋರಿಸುತ್ತಾ ತಾವು ಆಗಮಿಸಿದ್ದ ವಾಹನದ ಕಡೆಗೆ ಸಾಗಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮತದಾನ ನಡೆಯುತ್ತಿರುವಂತೆಯೇ ಪ್ರಧಾನಿ ಮೋದಿ ಈ ರೀತಿ ಜನರತ್ತ ಕೈಬೀಸುವ ಮೂಲಕ ರೋಡ್ ಶೋ ಮಾಡಿದ್ದಾರೆ. ಇದರಿಂದ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಚುನಾವಣಾ ಆಯೋಗವನ್ನೂ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆಗೆ ಒಂದು ದಿನ ಮುನ್ನ ಟಿವಿ ಸಂದರ್ಶನ ನೀಡಿರುವುದಕ್ಕೆ ಸ್ಪಷ್ಟೀಕರಣ ಕೇಳಿರುವ ಚುನಾವಣಾ ಆಯೋಗ ಬಿಜೆಪಿ ಎಷ್ಟು ಬಾರಿ ನೀತಿಸಂಹಿತೆ ಉಲ್ಲಂಘಿಸಿದರೂ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಸೋಲುವ ಭೀತಿ ಎದುರಾಗಿದ್ದು ಈಗ ದ್ರಾಕ್ಷೆ ಹುಳಿಯಾಗಿದೆ ಎಂಬ ನರಿಯಂತೆ ವರ್ತಿಸುತ್ತಿದೆ ಎಂದು ವ್ಯಂಗ್ಯವಾಡಿದೆ. ಎರಡು ಪಕ್ಷಗಳ ನಾಯಕರು ಕೂಡಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಕಾಂಗ್ರೆಸ್ ಕಾರ್ಯಕರ್ತರು ಆಯೋಗದ ದೆಹಲಿ ಮುಖ್ಯಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಗುಜರಾತ್ ಚುನಾವಣೆಯನ್ನು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ ಗುರುವಾರದಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ 93 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಎರಡನೇ ಹಂತದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರನ್ನು ಹೊಂದಿರುವ ನಗರ ಪ್ರದೇಶಗಳೇ ಹೆಚ್ಚಾಗಿರುವ ಕಾರಣ ಈ ಹಂತವು ಬಿಜೆಪಿಗೆ ಬಹಳ ಪ್ರಮುಖವಾಗಿದೆ. ಮತದಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಪ್ರಧಾನಿ ಮೋದಿ ಗುರುವಾರ ಬೆಳಿಗ್ಗೆಯೇ ಮನವಿ ಮಾಡಿಕೊಂಡಿದ್ದರು.
ಮುಖ್ಯವಾಗಿ ಅಹ್ಮದಾಬಾದ್ ಮತ್ತು ವಡೋದರವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಈ ಎರಡು ದೊಡ್ಡ ನಗರಗಳ 31 ಸ್ಥಾನಗಳ ಪೈಕಿ ಬಿಜೆಪಿ ಹಿಂದಿನ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆದ್ದಿತ್ತು. ಗುರುವಾರ ಚುನಾವಣೆ ನಡೆದ 93 ಕ್ಷೇತ್ರಗಳಲ್ಲಿ ಬಿಜೆಪಿ ಹಿಂದೆ ನಡೆದ ಚುನಾವಣೆಯಲ್ಲಿ 52 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ 39 ಸ್ಥಾನಗಳನ್ನು ಗೆದ್ದಿತ್ತು.
ಕಳೆದ 22 ವರ್ಷಗಳಿಂದ ಗಜರಾತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಈ ಬಾರಿ ಆಡಳಿತವಿರೋಧಿ ಅಲೆಯಿಂದ ಉಂಟಾಗಬಹುದಾದ ಯಾವುದೇ ನಷ್ಟವನ್ನು ಬುಡಕಟ್ಟು ಜನಾಂಗದ ಜನರ ಮತ ಪಡೆಯುವ ಮೂಲಕ ಸರಿಗಟ್ಟಲು ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿ ಕೂಡಾ ಬುಡಕಟ್ಟು ಪ್ರದೇಶಗಳಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಸಲುವಾಗಿ ಸ್ಥಳೀಯ ನಾಯಕರ ಜೊತೆಗೂಡಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಗುಜರಾತ್‌ನ 89 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಮತ್ತು ಪಟೇಲರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಡಿಮೆ ಮತದಾನ ದಾಖಲಾಗಿತ್ತು. ಹಿಂದಿನ ಬಹುತೇಕ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಪಟೇಲರು ಈ ಬಾರಿ ಮೀಸಲಾತಿ ವಿವಾದದ ಕಾರಣದಿಂದಾಗಿ ಬಿಜೆಪಿಯನ್ನು ಬೆಂಬಲಿಸದಿರುವ ನಿರ್ಧಾರವನ್ನು ತಳೆದಿದ್ದಾರೆ.
ಜನರ ಆಕ್ರೋಶವನ್ನು ಆಡಳಿತಾರೂಢ ಪಕ್ಷದ ವಿರುದ್ಧ ಬಳಸಲು ಮುಂದಾದ ಕಾಂಗ್ರೆಸ್ ದಲಿತ ನಾಯಕ ಜಿಗ್ನೇಶ್ ಮೆವಾನಿ, ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಮತ್ತು ಪಾಟಿದಾರ್ ಮೀಸಲಾತಿ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್ ಜೊತೆ ಕೈಜೊಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣೆಯನ್ನು ವಿಕಾಸ ಮತ್ತು ವಂಶವಾದದ ನಡುವಿನ ಹೋರಾಟ ಎಂದು ವ್ಯಾಖ್ಯಾನಿಸಿದ್ದಾರೆ. ಡಿಸೆಂಬರ್ 18ರಂದು ಗುಜರಾತ್ ಚುನಾವಣೆಯ ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ.







