ಕುದುರೆ ರೇಸ್ ಒಂದು ಕ್ರೀಡೆ: ಹೈಕೋರ್ಟ್‌ಗೆ ಅರ್ಜಿದಾರರ ಪರ ವಕೀಲರ ಹೇಳಿಕೆ
ಟರ್ಫ ಕ್ಲಬ್ ಪರವಾನಿಗೆ ನವೀಕರಣ ಮಾಡದ ವಿಚಾರ
ಬೆಂಗಳೂರು, ಡಿ.14: ಬೆಂಗಳೂರು ಟರ್ಫ್ ಕ್ಲಬ್ ಪರವಾನಿಗೆ ನವೀಕರಣ ಮಾಡದ ವಿಚಾರವಾಗಿ ಟರ್ಫ್ ಕ್ಲಬ್‌ನವರು ಕುದುರೆ ರೇಸ್‌ಗೆ ಯಾವುದೆ ಅರ್ಜಿಯನ್ನು ಸರಕಾರಕ್ಕೆ ಸಲ್ಲಿಸಿಲ್ಲ ಎಂದು ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರು ಹೈಕೋರ್ಟ್‌ಗೆ ಹೇಳಿಕೆ ನೀಡಿದರು.
ಎಚ್.ಎಸ್.ಚಂದ್ರೇಗೌಡ ಸೇರಿ ಇತರೆ 10 ಮಂದಿ ಟರ್ಫ್ ಕ್ಲಬ್ ಸದಸ್ಯರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಧ್ಯಂತರ ಆದೇಶವನ್ನು ಡಿ.15ರ ಶು ್ರವಾರ ಪ್ರಕಟಿಸುವುದಾಗಿ ತಿಳಿಸಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ನಾಗಾನಂದ ಅವರು, ರಾಜ್ಯ ಸರಕಾರ ಬೆಂಗಳೂರು ಟರ್ಫ್ ಕ್ಲಬ್‌ನ ಪರವಾನಿಗೆಯನ್ನು ನವೀಕರಣ ಮಾಡದಿದ್ದರೆ ಟರ್ಫ್ ಕ್ಲಬ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ನೀಡಲು ಹಾಗೂ ಕುದುರೆಗಳ ಪಾಲನೆಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.
ಟರ್ಫ್ ಕ್ಲಬ್‌ನಲ್ಲಿ ಯಾವುದೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದಿಲ್ಲ. ಹಾಗೊಂದು ಬಾರಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ ಎಂದು ಅನುಮಾನ ಬಂದರೆ ಕ್ಲಬ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ತನಿಖೆ ಮಾಡಬಹುದೆಂದು ಪೀಠಕ್ಕೆ ತಿಳಿಸಿದರು.
ಟರ್ಫ್ ಕ್ಲಬ್‌ನಲ್ಲಿ ನಡೆಯುವ ಕುದುರೆ ರೇಸ್ ಒಂದು ಕ್ರೀಡೆಯಾಗಿದ್ದು, ಯಾವುದೆ ಜೂಜಾಟವಲ್ಲ ಎಂದು ಪೀಠಕ್ಕೆ ತಿಳಿಸಿದರು. ಸರಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರು, ಟರ್ಫ್ ಕ್ಲಬ್‌ನವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ಬೆಟ್ಟಿಂಗ್‌ಗೆ ಅರ್ಜಿ ಸಲ್ಲಿಸಿ, ಕುದುರೆ ರೇಸ್‌ಗೆ ಯಾವುದೆ ಅರ್ಜಿಯನ್ನು ಸಲ್ಲಿಸಿಲ್ಲ. ಇದರಿಂದ, ಟರ್ಫ್ ಕ್ಲಬ್ ಪರವಾನಿಗೆಗೆ ಅವಕಾಶ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ರಾಜ್ಯ ಸರಕಾರ ಕಮಿಟಿವೊಂದನ್ನು ರಚಿಸಿದ್ದು, 10 ದಿನಗಳಲ್ಲಿ ಟರ್ಫ್ ಕ್ಲಬ್ ಪರವಾನಗಿ ನವೀಕರಣಕ್ಕೆ ಸಂಬಂಧಪಟ್ಟಂತೆ ತೀರ್ಮಾನ ಕೈಗೊಳ್ಳಲಿದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಮಧ್ಯಂತರ ಆದೇಶವನ್ನು ಡಿ.15ರಂದು ಪ್ರಕಟಿಸುವುದಾಗಿ ತಿಳಿಸಿ ಆದೇಶವನ್ನು ಮುಂದೂಡಿತು.







