ಭೂ ಮಾಲಕರು ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬಿಡಿಎನಿಂದ ಜಮೀನು ಸ್ವಾಧೀನಪಡಿಸಿಕೊಂಡ ವಿಚಾರ

ಬೆಂಗಳೂರು, ಡಿ.14: ಬಿಟಿಎಂ ಲೇಔಟ್ ಬಡಾವಣೆ ರಚನೆಗಾಗಿ ನಗರದ ಬಿಳೇಕಹಳ್ಳಿಯಲ್ಲಿ ಏಳು ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕ್ರಮ ರದ್ದುಪಡಿಸುವಂತೆ ಕೋರಿ ಸುಮಾರು 71 ಮಂದಿ ಭೂ ಮಾಲಕರು ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ತಕರಾರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ, ಪ್ರತಿ ಅರ್ಜಿಗೂ ಸಂಬಂಧಿಸಿದಂತೆ ತಲಾ 25 ಸಾವಿರ ದಂಡ ವಿಧಿಸಿದೆ.
ಚಿನ್ನ ಪಾಪಮ್ಮ ಸೇರಿ ಒಟ್ಟು 71 ಮಂದಿ ಭೂ ಮಾಲಕರು ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕ ಸದಸ್ಯ ಪೀಠ, ಗುರುವಾರ ಅರ್ಜಿಗಳನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿತು. ಅಲ್ಲದೆ, ದಂಡ ಮೊತ್ತವನ್ನು ಎಂಟು ವಾರಗಳಲ್ಲಿ ಬಿಡಿಎಗೆ ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು.
ಜಮೀನು ವಶಪಡಿಸಿಕೊಂಡು ನಿವೇಶನ ರಚಿಸಿದ ನಂತರ ನಿವೇಶನದಾರಿಗೆ ಹಂಚಿ ಭೂ ಮಾಲಕರಿಗೆ ನೀಡಬೇಕಿದ್ದ ಪರಿಹಾರವನ್ನು ಸಿವಿಲ್ ಕೊರ್ಟ್‌ನಲ್ಲಿ ಠೇವಣಿಯಿಟ್ಟಿದ್ದರೂ ಅನಗತ್ಯವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಧೋರಣೆಯನ್ನು ನ್ಯಾಯಪೀಠ ಇದೇ ವೇಳೆ ಖಂಡಿಸಿದೆ.
ಪ್ರಕರಣವೇನು: ಬಿಟಿಎಂ ಲೇಔಟ್ ಬಡಾವಣೆ ರಚನೆಗಾಗಿ ನಗರದ ಬಿಳೇಕಹಳ್ಳಿಯ ಸರ್ವೇ ನಂ 132ರಲ್ಲಿ ಏಳು ಎಕರೆ ಜಮೀನನ್ನು 1980ರ ದಶಕದಲ್ಲಿ ಬಿಡಿಎ ವಶಪಡಿಸಿಕೊಂಡಿತ್ತು. ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ 2014ರಲ್ಲಿ ಒಟ್ಟು 71 ಮಂದಿ ಮಾಲಕರು ಹೈಕೋರ್ಟ್ ನಾಲ್ಕು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಈ ಜಮೀನು ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ಹಲವು ವರ್ಷಗಳ ಕಳೆದರೂ ಬಡಾವಣೆ ನಿರ್ಮಿಸಿಲ್ಲ. ಜಮೀನನ್ನು ಬಿಡಿಎ ಈವರೆಗೂ ವಶಕ್ಕೆ ಪಡೆದಿಲ್ಲ. ಸದ್ಯ ಜಮೀನಿನ ತಮ್ಮ ವಶದಲ್ಲಿದೆ. ಹೀಗಾಗಿ, ಸ್ವಾಧೀನಕ್ಕೆ ಬಡಾವಣೆ ರಚನೆ ಯೋಜನೆ ಮಾನ್ಯತೆ ಕಳೆದುಕೊಂಡಿದೆ ಇನ್ನು ಜಮೀನು ಮಾಲಕರಿಗೆ ಪರಿಹಾರವೂ ಕೊಟ್ಟಿಲ್ಲ. ಹೀಗಾಗಿ, ಏಳು ಎಕರೆ ಜಮೀನು ಸ್ವಾಧೀನಕ್ಕೆ ಬಿಡಿಎ ಹೊರಡಿಸಿದ್ದ ಅಂತಿಮ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ವಾದವನ್ನು ಬಿಡಿಎ ಪರ ವಕೀಲರು ಅಲ್ಲಗೆಳೆದಿದ್ದರು. ಬಡಾವಣೆ ರಚಿಸಿ ಅರ್ಹರಿಗೆ ನಿವೇಶನ ಹಂಚಲಾಗಿದೆ. ಜಮೀನು ಮಾಲಕರಿಗೆ ನೀಡಬೇಕಾದ ಪರಿಹಾರವನ್ನು ಪ್ರಕಟಿಸಿದ್ದು, ಮೊತ್ತವನ್ನು ಸಿವಿಲ್ ಕೋರ್ಟ್‌ನಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಆದೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್, ಸುಖಾ ಸುಮ್ಮನೆ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಾರೆ. ಇದು ಕಾನೂನು ಪ್ರಕ್ರಿಯೆ ದುರುಪಯೋಗವಾಗಿದೆ. ಇನ್ನು ಬಿಡಿಎ ತಮಗೆ ಪರಿಹಾರವನ್ನು ಕೊಟ್ಟಿಲ್ಲ ಹಾಗೂ ಸದ್ಯ ಭೂಮಿ ತಮ್ಮ ಒಡೆತನದಲ್ಲಿ ಇದೆ ಎಂಬುದನ್ನು ದೃಢಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ. ಇದು ಮೂರನೇ ಸುತ್ತಿನ ವ್ಯಾಜ್ಯವಾಗಿದ್ದು, ಪ್ರಕರಣದ ಕುರಿತು ಪದೇ ಪದೇ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ಹೀಗಾಗಿ ಪ್ರಕರಣದಲ್ಲಿ ಯಾವುದೇ ಪರಿಹಾರ ಪಡೆಯಲು ಅರ್ಜಿದಾರರು ಅರ್ಹರಾಗಿಲ್ಲ. ಸುಖಾಸುಮ್ಮನೆ ಅರ್ಜಿ ಸಲ್ಲಿಸಿ ಕೋರ್ಟ್ ಸಮಯ ವ್ಯರ್ಥ ಮಾಡಿರುವುದರ ಜೊತಗೆ ಬಿಡಿಎಗೂ ತೊಂದರೆ ನೀಡಿದ್ದಾರೆ. ಆದ್ದರಿಂದ ಅವರಿಗೆ ದಂಡ ವಿಧಿಸುವುದು ಸೂಕ್ತ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.







