ರಕ್ಷಕ ಸೇನೆ ಪಕ್ಷದ ಪ್ರಚಾರಕ್ಕೆ ಅವಕಾಶವಿಲ್ಲ: ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಡಿ.14: ರಕ್ಷಕ ಸೇನೆ ಪಕ್ಷದ ಪ್ರಚಾರಕ್ಕೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣೆ ಆಯೋಗ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕಿ, ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಶಶಿಧರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ರಕ್ಷಕ ಸೇನೆ ಪಕ್ಷದ ಪರವಾಗಿ ಪ್ರಚಾರ ಮಾಡಲು ಹಾಗೂ ಸದಸ್ಯರನ್ನಾಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ ಎಂದು ಬೆಂಗಳೂರು ಪೊಲೀಸ್ ಮಹಾ ನಿರ್ದೇಶಕಿ, ಬೆಂಗಳೂರು ಪೊಲೀಸ್ ಆಯುಕ್ತ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೆ ಪೊಲೀಸ್ ಕಾಲನಿಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಚುನಾವಣೆ ಆಯೋಗ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕಿ, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.





