ಸಿಎಂಗೆ ವರ್ಗಾವಣೆ ಶಿಫಾರಸ್ಸಿಗೆ ಸಹಿ ಹಾಕಲು ಮಾತ್ರ ಸಮಯವಿದೆಯೇ: ಹೈಕೋರ್ಟ್ ಪ್ರಶ್ನೆ

ಬೆಂಗಳೂರು, ಡಿ.14: ರಾಜ್ಯ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿಗಳು ಸಹ ಯಾವಾಗಲೂ ಬ್ಯೂಸಿ ಇರುತ್ತಾರೆ. ಆದರೆ, ಅವರ ಶಿಫಾರಸು ಮೇರೆಗೆ ಸರಕಾರಿ ನೌಕರರ ವರ್ಗಾವಣೆಗೆ ಆದೇಶಿಸಲಾಗುತ್ತದೆ. ಅಂದರೆ ವರ್ಗಾವಣೆ ಶಿಫಾರಸುಗಳಿಗೆ ಮಾತ್ರ ಸಹಿ ಹಾಕಲು ಮುಖ್ಯಮಂತ್ರಿಗಳಿಗೆ ಪುರುಸೊತ್ತಿದೆಯೇ ಎಂದು ಹೈಕೋರ್ಟ್ ಗುರುವಾರ ಪ್ರಶ್ನಿಸಿದೆ.
ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರಕಾರಿ ವಕೀಲರನ್ನು ಹೀಗೆ ಪ್ರಶ್ನಿಸಿತು.
ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯಮಂತ್ರಿಗಳ ಶಿಫಾರಸು ಮೇರೆಗೆ ಪ್ರಕರಣದಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಕೋರ್ಟ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯ ಸರಕಾರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಡಳಿತಕ್ಕೆ ಅನುಕೂಲವಾಗುವ ಉದ್ದೇಶದಿಂದ ವರ್ಗಾವಣೆ ಮಾಡಬಹುದು. ಆದರೆ, ಸರಕಾರದಲ್ಲಿ ವೃತ್ತಿಪರತೆ ಇಲ್ಲವಾಗಿದೆ. ಸಿಎಂ ಶಿಫಾರಸು ಮೇರೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗದು ಎಂದು ಬೇಸರ ವ್ಯಕ್ತಪಡಿಸಿತು.
ಬಳಿಕ ಮುಖ್ಯಮಂತ್ರಿಗಳು ಸಹ ತುಂಬಾ ಬ್ಯೂಸಿ ಆಗಿರುತ್ತಾರೆ. ಆದರೆ, ಪ್ರತಿನಿತ್ಯ ಸಾಕಷ್ಟು ವರ್ಗಾವಣೆಗೆ ಆದೇಶ ಮಾಡುತ್ತಾರಲ್ಲ. ವರ್ಗಾವಣೆಯ ಶಿಫಾರಸು ಪತ್ರಕ್ಕೆ ಸಹಿ ಹಾಕಲು ಅವರಿಗೆ ಪುರುಸೊತ್ತು ಇದೆಯೇ. ನ್ಯಾಯಾಲಯಕ್ಕೆ ಸರಕಾರಿ ನೌಕರರ ವರ್ಗಾವಣೆ ಸಂಬಂಧ ಪ್ರತಿನಿತ್ಯ ಹಲವು ವ್ಯಾಜ್ಯಗಳು ನಮ್ಮ ಮುಂದೆ ವಿಚಾರಣೆಗೆ ಬರುತ್ತಿವೆ. ಅದರಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗೆ ಅನುಕೂಲವಾಗುವಂತೆ ವರ್ಗಾವಣೆಗೆ ಶಿಫಾರಸು ಮಾಡುವುದು ಕಂಡುಬರುವುದಿಲ್ಲ ಎಂದು ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತು.







