ಬಿಜೆಪಿ ಜಾಥಾ ಚುನಾವಣಾ ಗಿಮಿಕ್ : ಕಾಂಗ್ರೆಸ್ ಟೀಕೆ
ಮಡಿಕೇರಿ, ಡಿ.14 :ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಹಾದಿ ತಪ್ಪಿಸುವುದಕ್ಕಾಗಿ ಬಿಜೆಪಿ ರಸ್ತೆ ಕಾಮಗಾರಿಯ ವಿಚಾರವನ್ನು ನೆಪವಾಗಿಟ್ಟುಕೊಂಡು ಪ್ರತಿಭಟನಾ ಜಾಥಾ ನಡೆಸಿದೆಯೆಂದು ಕಾಂಗ್ರೆಸ್ ಪಕ್ಷದ ಬೆಟ್ಟಗೇರಿ ವಲಯ ಸಮಿತಿ ಆರೋಪಿಸಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ನಾಪಂಡ ಗಣೇಶ್, ಜಿಲ್ಲೆಯಲ್ಲಿ ಕಾಫಿ ಬೆಳೆೆಗಾರರ ಸಮಸ್ಯೆ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುವ ಬದಲು ಕೇವಲ ರಸ್ತೆಯ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಎಂದು ಟೀಕಿಸಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಜನಪರವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡುತ್ತಿದ್ದಾರೆ. ಭಾಗಮಂಡಲ ರಸ್ತೆ ದುರಸ್ತಿ ಕಾರ್ಯ ಆರಂಗೊಂಡಿದ್ದರೂ ಬಿಜೆಪಿ ಪ್ರತಿಭಟನೆ ನಡೆಸಿರುವುದು ಖಂಡನೀಯವೆಂದು ಗಣೇಶ್ ತಿಳಿಸಿದರು. ಪಕ್ಷದ ಮೋಹನ್ ರಾಜ್ ಮಾತನಾಡಿ, ಮೇಕೇರಿ, ಹಾಕತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅನುದಾನದಡಿ ಶಾಸಕಿ ವೀಣಾ ಅಚ್ಚಯ್ಯ ಅವರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದೇ ರಸ್ತೆ ಅವ್ಯವಸ್ಥೆ ಬಗ್ಗೆ ಶಾಸಕ ಬೋಪಯ್ಯ ಅವರ ಬಳಿ ಗ್ರಾಮಸ್ಥರು ಮನವಿ ಮಾಡಿಕೊಂಡು ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿದ್ದರು. ಆದರೆ, ಶಾಸಕರು ಇದಕ್ಕೆ ಶಿಫಾರಸು ಪತ್ರ ತನ್ನಿಂದ ಸಾಧ್ಯವಿಲ್ಲ. ವಿಧಾನ ಸೌಧದಲ್ಲಿ ಮಾಡಬೇಕೆಂದು ನಿರ್ಲಕ್ಷ್ಯ ವಹಿಸಿದ್ದರು ಎಂದು ಮೋಹನ್ ರಾಜ್ ಆರೋಪಿಸಿದರು.
ಕಾರ್ಯದರ್ಶಿ ಕೆ.ಯು.ಹಾರೀಸ್ ಮಾತನಾಡಿದರು. ಗೋಷ್ಠಿಯಲ್ಲಿ ಬೆಟ್ಟಗೇರಿ ಗ್ರಾಪಂ ಸದಸ್ಯ ತೆನ್ನೀರ ರಮೇಶ್ ಪೊನ್ನಪ್ಪ ಹಾಗೂ ಕಾಂಗ್ರೆಸ್ ಬೆಟ್ಟಗೇರಿ ಸಮಿತಿ ಕಾರ್ಯದರ್ಶಿ ತೀರ್ಥಪ್ರಸಾದ್ ಹಾಗೂ ಡಿಸಿಸಿ ಸದಸ್ಯ ಕಾರ್ಯಪ್ಪಉಪಸ್ಥಿತರಿದ್ದರು.





