ಬಸ್ ಡೋರ್ ಬಡಿದು ಸೈಕಲ್ ಸವಾರ ಮೃತ್ಯು
ಶಿವಮೊಗ್ಗ, ಡಿ. 14: ಕಾಲೇಜು ವಿದ್ಯಾರ್ಥಿಗಳಿದ್ದ ಬಸ್‌ನ ಲಗ್ಗೇಜ್ ಡೋರ್ ಬಡಿದು ಸೈಕಲ್ ಸವಾರರೋರ್ವರು ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದಿದೆ. ಕುಂಸಿ ಗ್ರಾಮದ ನಿವಾಸಿ, ಸ್ಥಳೀಯ ಜೂನಿಯರ್ ಕಾಲೇಜ್‌ನಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಭೀಮಪ್ಪ(60) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭೀಮಪ್ಪರನ್ನು ತಕ್ಷಣವೇ ಶಿವಮೊಗ್ಗದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಘಟನೆ: ತುಮಕೂರು ತಾಲೂಕು ಗೂಳೂರು ಗ್ರಾಮದ ಸಿದ್ದಗಂಗಾ ಪದವಿ ಪೂರ್ವ ಕಾಲೇಜ್‌ಗೆ ಸೇರಿದ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಜೋಗ್‌ಫಾಲ್ಸ್ ಪ್ರವಾಸಕ್ಕೆ ಕರೆತರಲಾಗಿತ್ತು. ಜೋಗ್‌ಗೆ ಭೇಟಿಯಿತ್ತು ಶಿವಮೊಗ್ಗದೆಡೆಗೆ ಆಗಮಿಸುವಾಗ ಕಾಲೇಜು ಕೆಲಸ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಭೀಮಪ್ಪರ ಮುಖಕ್ಕೆ ಬಸ್‌ನ ಲಗ್ಗೇಜ್ ಡೋರ್ ಬಡಿದಿತ್ತು. ಇದರಿಂದ ಸೈಕಲ್ ಮೇಲಿಂದ ಭೀಮಪ್ಪ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಬಸ್ ಚಾಲಕನ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







