ಸೊಸೈಟಿಯಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ: ದೂರು
ಬ್ರಹ್ಮಾವರ, ಡಿ.14: ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಬ್ರಹ್ಮಾವರ ಶಾಖೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿಯ ನ್ಯಾಯಾಲಯದಿಂದ ಬಂದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊಸೈಟಿಯ ಸರಾಪನಾಗಿದ್ದ ಬ್ರಹ್ಮಾವರ ವೈಷ್ಣವಿ ಜ್ಯುವೆಲರ್ಸ್‌ನ ಮಾಲಕ ರಮೇಶ ಆಚಾರ್ಯ ಒಟ್ಟು 17 ಬಾರಿ ಸೊಸೈಟಿಯಲ್ಲಿ ನಕಲಿ ಚಿನ್ನಾಭರಣ ಗಳನ್ನು ಅಸಲಿ ಎಂಬುದಾಗಿ ದೃಢಪತ್ರ ನೀಡಿ ಸಂಸ್ಥೆಗೆ ನಂಬಿಸಿ ಒಟ್ಟು 11,53, 500ರೂ. ಸಾಲ ಪಡೆದು ವಂಚನೆ ಮಾಡಿರುವುದಾಗಿ ದೂರಲಾಗಿದೆ.
ಬಾರಕೂರು ಹೇರಾಡಿಯ ಶ್ರೀಪತಿ ಆಚಾರ್ಯ(40) ಎಂಬವರು 2 ಬಾರಿ ನಕಲಿ ಚಿನ್ನಾಭರಣ ಅಡವಿಟ್ಟು ಒಟ್ಟು 93,000ರೂ. ಮತ್ತು ಚಾಂತಾರಿನ ಸರಿತಾ ಆಚಾರ್ಯ(33) ಎಂಬವರು ಆರು ಬಾರಿ ನಕಲಿ ಚಿನ್ನಾಭರಣ ಅಡ ವಿಟ್ಟು ಒಟ್ಟು 4,23,030ರೂ. ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಡವು ಇಡುವ ಚಿನ್ನಾಭರಣಕ್ಕೆ ಸರಾಫನಾದ ರಮೇಶ್ ಆಚಾರ್ಯ ಪರೀಕ್ಷಿಸಿ ದೃಢಪತ್ರ ನೀಡಿದ ಬಳಿಕ ಮತ್ತಿಬ್ಬರಿಗೆ ಸೊಸೈಟಿಯು ಸಾಲವನ್ನು ನೀಡಿದ್ದು, ಇತ್ತೀಚೆಗೆ ಸಹಾಯಕ ನಿಬಂಧಕರು ಸೊಸೈಟಿಯಲ್ಲಿ ಅಡವಿಟ್ಟ ಚಿನ್ನಾ ಭರಣಗಳ ಗುಣಮಟ್ಟವನ್ನು ಬೇರೆ ಸರಾಫರಿಂದ ಪರೀಕ್ಷಿಸುವಂತೆ ನೀಡಿದ ನಿರ್ದೇಶನದ ಮೇರೆಗೆ ಹಿರಿಯಡ್ಕದ ಉದಯ ಕುಮಾರ್ ಮೂಲಕ ಪರೀಕ್ಷಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ ಎಂದು ದೂರಲಾಗಿದೆ.







