ಡಿ.16: ಗೃಹರಕ್ಷಕ ದಳದ ಪ.ವಲಯ ಕ್ರೀಡಾಕೂಟ
ಉಡುಪಿ, ಡಿ.14: ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟ ಡಿ.16ರಿಂದ 18ರವರೆಗೆ ಉಡುಪಿಯ ಚಂದು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಒಟ್ಟು 140 ಮಂದಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಕ್ರೀಡಾಕೂಟವನ್ನು 16ರ ಶನಿವಾರ ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕೆಎಂಸಿ ಮಣಿಪಾಲದ ಯೂರಾಲಜಿ ವಿಭಾಗದ ಪ್ರೊ.ಡಾ.ಪದ್ಮರಾಜ ಹೆಗ್ಡೆ ಹಾಗೂ ಇತರರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಡಿ.18ರ ಸೋಮವಾರ ಸಂಜೆ 4ಗಂಟೆಗೆ ನಡೆಯಲಿದ್ದು, ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಹೇಮಂತ್ ನಿಂಬಾಳ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು, ಚಿಕ್ಕಮಗಳೂರಿನ ಪ್ರಭಾರ ಜಿಲ್ಲಾ ಸಮಾದೇಷ್ಟ ಎಂ.ಎ.ಸತೀಶ್, ಉತ್ತರ ಕನ್ನಡದ ಡಾ.ಗೋಪಾಲ್ ಬ್ಯಾಕ್‌ವಾಡ್ ಉಪಸ್ಥಿತರಿರುವರು.
ಉಡುಪಿ ಜಿಲ್ಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಇದೀಗ ಮೂರನೇ ಬಾರಿ ನಡೆಯುತಿದ್ದು, ಇದರಲ್ಲಿ ಅಗ್ರ ಎರಡು ಸ್ಥಾನ ಪಡೆದ ಒಟ್ಟು 50 ಮಂದಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಡಾ.ಪ್ರಶಾಂತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ಡೆಪ್ಯುಟಿ ಕಮಾಂಡೆಂಟ್ ರಮೇಶ್, ಕವಿತಾ, ಶ್ಯಾಮಲಾ ಉಪಸ್ಥಿತರಿದ್ದರು.







