ಎಲ್ಲಾ ಶಿಕ್ಷಕರ ಪರವಾಗಿ ಕೆಲಸ ಮಾಡುವೆ: ರಮೇಶ್
ಉಡುಪಿ, ಡಿ.14: ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡುವವರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು. ಎಲ್ಲಾ ಶಿಕ್ಷಕರ ಪರವಾಗಿ ಕೆಲಸ ಮಾಡಲು ಸಮರ್ಥನಾಗಿರಬೇಕೆಂಬ ಉದ್ದೇಶದಿಂದ ತಾನು ಈ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರು ವುದಾಗಿ ಶಿವಮೊಗ್ಗದ ಎಂ.ಶಂಕರ ಶಂಕರಘಟ್ಟ ಹೇಳಿದ್ದಾರೆ.
ಕುವೆಂಪು ವಿವಿಯಲ್ಲಿ 25 ವರ್ಷಗಳ ಕಾಲ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಸೇರಿದಂತೆ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು, ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ಮೂರು ತಿಂಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿರುವುದಾಗಿ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಕ್ಷೇತ್ರದ ಎಲ್ಲಾ ಶಿಕ್ಷಕರ ಧ್ವನಿಯಾಗಿ ತಾನು ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇನೆ. ಆದುದರಿಂದ ಎಲ್ಲಾ ಶಿಕ್ಷಕರು ಮುಂದಿನ ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು. ತಾನು ದೀನಬಂಧು ಸೇವಾ ಟ್ರಸ್ಟ್‌ನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದು, ಇದರ ಮೂಲಕ ಕಳೆದ ಹಲವಾರು ವರ್ಷಗಳಿಂದ ಅನೇಕ ರೀತಿಯ ಸಮಾಜ ಸೇವಾ ಕಾರ್ಯಕ್ರಮ ಗಳನ್ನು ಮಾಡುತಿದ್ದು, ಅದೇ ರೀತಿ ಶಿಕ್ಷಕರ ಪರವಾಗಿ ಕೆಲಸ ಮಾಡುವುದಾಗಿ ನುಡಿದರು.
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ದೃಷ್ಟಿಯಿಂದ ಕಳೆದ ಆರು ತಿಂಗಳುಗಳಿಂದ ಐದು ಜಿಲ್ಲೆ ಹಾಗೂ ಎರಡು ತಾಲೂಕು (ದಾವಣಗೆರೆ)ಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಖುದ್ದಾಗಿ ಬೆಂಬಲವನ್ನು ಕೋರುತ್ತಿರುವುದಾಗಿ ರಮೇಶ್ ತಿಳಿಸಿದರು. ಈಗಾಗಲೇ 460 ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ್ದೇನೆ ಎಂದರು.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 60,000 ಶಿಕ್ಷಕ ಮತದಾರರಿರುವ ಅಂದಾಜು ಇದ್ದು, ಕೇವಲ 15000 ಮಂದಿ ಹೆಸರು ಮಾತ್ರ ನೊಂದಣಿ ಗೊಂಡಿದೆ. ಆದುದರಿಂದ ಅರ್ಹ ಶಿಕ್ಷಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕೆಲಸವನ್ನು ತಾನು ಮಾಡುತಿದ್ದು, ಈಗಾಗಲೇ 17,000 ಮಂದಿ ನೊಂದಣಿಗೊಂಡಿದ್ದಾರೆ ಎಂದು ರಮೇಶ್ ನುಡಿದರು.







