ಬಿಜೆಪಿಯ ಪರಿವರ್ತನಾ ಯಾತ್ರೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

► ಯಾತ್ರೆಯಿಂದ ರಾಜ್ಯಕ್ಕೆ ಲಾಭವಿಲ್ಲ
► ಯಾತ್ರೆಗೆ ಜನತೆ ಮರುಳಾಗಲ್ಲ
►ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಕೋಮು ಗಲಭೆ ತಾಂಡವ
ಚಿತ್ರದುರ್ಗ, ಡಿ.14: ನವಕರ್ನಾಟಕ ಪರಿವರ್ತನಾ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬಿಜೆಪಿ ಮೊದಲು ತನ್ನ ಮನಸ್ಸು ಪರಿವರ್ತನೆ ಮಾಡಿಕೊಳ್ಳಲಿ ಎಂದು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗದ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದೆಲ್ಲೆಡೆ ಕೋಮುಗಲಭೆ ತಾಂಡವವಾಡುತ್ತಿದೆ. ಅಶಾಂತಿಯ ವಾತಾವರಣದಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಹಿಂದೂ ಮತ್ತು ಮುಸ್ಲಿಮರ ನಡುವಿನ ಸೌಹಾರ್ದವನ್ನು ಕದಡುವುದೇ ಬಿಜೆಪಿ ಸಾಧನೆ ಎಂದು ಪ್ರತಿಭಟನಾಕಾರರು ಬಿಜೆಪಿ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧು ಪಾಪೇಗೌಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ನಡೆಸುವುದಕ್ಕೂ ಮುನ್ನ ಮೊದಲು ಮನಸ್ಸುಗಳನ್ನು ಶುದ್ಧೀಕರಣಗೊಳಿಸಿಕೊಳ್ಳಬೇಕು. ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ಉಂಟಾಗ ಗಲಭೆಯ ಹಿನ್ನೆಲೆಯಲ್ಲಿ 144ನೇ ಸೆಕ್ಷನ್ ಜಾರಿಯಲ್ಲಿದ್ದರೂ ಸಂಸದ ಪ್ರತಾಪ್ ಸಿಂಹ ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಪೊಲೀಸರಿಗೆ ಅಗೌರವ ತೋರಿದ್ದಾರೆ. ಇಂತವರೆಲ್ಲ ಸೇರಿಕೊಂಡು ಪರಿವರ್ತನಾ ಯಾತ್ರೆ ಮಾಡುವುದರಿಂದ ರಾಜ್ಯಕ್ಕೆ ಏನೂ ಲಾಭವಿಲ್ಲ. ಪ್ರಜ್ಞಾವಂತ ಮತದಾರರು ನಿಮ್ಮ ಯಾತ್ರೆಗೆ ಮರುಳಾಗುವುದಿಲ್ಲ ಎಂದು ಹೇಳಿದರು.
ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬಿ.ಯೋಗೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ಕೃಷ್ಣನಾಯ್ಕ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಹಸನ್‌ತಾಹೀರ್, ಉಪಾಧ್ಯಕ್ಷ ರೆಹಮಾನ್, ಪ್ರಧಾನ ಕಾರ್ಯದರ್ಶಿ ಯೂನೂಸ್, ಆಜಾಂ, ಮುಹಮ್ಮದ್ ರಫಿ, ಜಮೀಲ್, ಹರ್ಷ ಆಜಾಂ, ಜಗದೀಶ್, ಅಶ್ವಿನ್, ಅಶೋಕ್ ನಾಯ್ಡು, ಶಶಾಂಕ್, ನೌಷಾದ್, ಮಮತಾ, ವಸೀಂ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







