ಉರ್ದು ಶಾಲೆ ಉಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ
ಉರ್ದು ಶಿಕ್ಷಕರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಡಿಡಿಪಿಐ ರೇವಣಸಿದ್ದಪ್ಪ
ಚಿತ್ರದುರ್ಗ, ಡಿ.14: ಮಕ್ಕಳ ಹಾಜರಾತಿ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಉರ್ದು ಶಾಲೆಗಳು ಮುಚ್ಚದಂತೆ ಉಳಿಸುವ ಹೊಣೆಗಾರಿಕೆ ಉರ್ದು ಶಿಕ್ಷಕರ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರೇವಣಸಿದ್ದಪ್ಪಉರ್ದು ಶಿಕ್ಷಕರಿಗೆ ಕರೆ ನೀಡಿದ್ದಾರೆ.
ಕರ್ನಾಟಕ ಉರ್ದು ಅಕಾಡಮಿ ಬೆಂಗಳೂರು ವತಿಯಿಂದ ಪ್ರಪ್ರಥಮ ಬಾರಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲೆಯ ಸರಕಾರಿ ಶಾಲೆ ಉರ್ದು ಶಿಕ್ಷಕರಿಗೆ ಗುರುವಾರ ಹಮ್ಮಿಕೊಂಡಿದ್ದ ‘ಒಂದು ದಿನದ ಪುನಃಶ್ಚೇತನ ತರಬೇತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ವಿಷಯವಾಗಲಿ ಶಿಕ್ಷಕರಿಗೆ ತರಬೇತಿ ಮುಖ್ಯವಾಗಿ ಅಗತ್ಯವಿದೆ. ಇದರಿಂದ ಬೋಧನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಕೇವಲ ಕನ್ನಡ ಶಾಲೆಗಳಷ್ಟೇ ಮುಚ್ಚುವ ಭೀತಿಯನ್ನು ಎದುರಿಸುತ್ತಿಲ್ಲ. ಕೆಲವು ಉರ್ದು ಶಾಲೆಗಳಲ್ಲಿ ಮಕ್ಕಳಿಗಿಂತ ಶಿಕ್ಷಕರ ಸಂಖ್ಯೆಯೇ ಅಧಿಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಉರ್ದು ಶಾಲೆಗಳು ಉಳಿಯುವಂತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಉರ್ದು ಅಕಾಡಮಿ ಅಧ್ಯಕ್ಷ ಸೈಯದ್ ಖಧೀರ್ ನಾಜಿಮ್ ಮಾತನಾಡಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಪ್ರಥಮ ಬಾರಿಗೆ ಚಿತ್ರದುರ್ಗದಲ್ಲಿ ಉರ್ದು ಶಿಕ್ಷಕರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರ ಏರ್ಪಡಿಸಿದೆ. ಇಲ್ಲಿ ತಿಳಿದುಕೊಳ್ಳುವ ವಿಚಾರಗಳನ್ನು ನಿಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಉರ್ದು ಶಿಕ್ಷಕರಿಗೆ ತಾಕೀತು ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಕರ್ನಾಟಕ ಉರ್ದು ಅಕಾಡಮಿ ಹೊಸ ಗುರಿಯಿಟ್ಟುಕೊಂಡು ಉರ್ದು ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಉತ್ತಮವಾದುದು ಎಂದರು.
ಉರ್ದು ಇನ್‌ಸ್ಪೆಕ್ಟರ್ ಝಾಕೀರುಲ್ಲಾ ಶರೀಫ್, ಅಮ್ಜದ್ ಹುಸೈನ್ ಕರ್ನಾಟಕಿ, ಇಫ್ತಿಕಾರ್ ಅಹ್ಮದ್ ಶರೀಫ್, ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ವಿಜಯಕುಮಾರ್ ಸಜ್ಜನ್ ವೇದಿಕೆಯಲ್ಲಿದ್ದರು.
ಉರ್ದು ಶಾಲೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲು ರಾಜ್ಯ ಸರಕಾರ ಸಿದ್ಧವಿದೆ. ಇವೆಲ್ಲವನ್ನು ಬಳಸಿಕೊಂಡು ಉರ್ದು ಶಾಲೆಗಳ ಗುಣಮಟ್ಟವನ್ನು ಕಾಪಾಡಿಕೊಂಡು ಉರ್ದು ಭಾಷೆಯನ್ನು ಉಳಿಸಿ ಬೆಳೆಸಬೇಕು. ಸೈಯದ್ ಖಧೀರ್ ನಾಜಿಮ್,
ಕರ್ನಾಟಕ ಉರ್ದು ಅಕಾಡಮಿ ಅಧ್ಯಕ್ಷ