ಪೌರ ಕಾರ್ಮಿಕರು ಸಮಾಜದ ಆರೋಗ್ಯ ರಕ್ಷಕರು: ವೆಂಕಟೇಶ್ ಶ್ಲಾಘನೆ
ಸಫಾಯಿ ಕರ್ಮಚಾರಿಗಳ ವಿಚಾರ ಸಂಕಿರಣ
.jpg)
ಹಾಸನ,ಡಿ.14: ದೇಶ ಕಾಯುವ ಸೈನಿಕರಂತೆ ಪೌರಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳು ಸಮಾಜ ಕಾಪಾಡುವ ಆರೋಗ್ಯ ರಕ್ಷಕರಾಗಿದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಬಣ್ಣಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಗಳ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ವಿಭಾಗೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ನಿಗಮದಿಂದ ಸಿಗುವ ಸಾಲ ಸೌಲಭ್ಯವನ್ನು, ಪುನರ್ ವಸತಿ, ಆರೋಗ್ಯ ರಕ್ಷಣೆ, ಭದ್ರತೆ ಬಗ್ಗೆ ಗಮನ ನೀಡಲಾಗಿದೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ದುಶ್ಚಟಗಳಿಂದ ದೂರ ಇರಲು ಸಹಕಾರಿ ಆಗಲಿದೆ ಎಂದರು.ಹೇಳಿದ ಅವರು, ದೇಶದ ಯಾವುದೇ ರಾಜ್ಯದಲ್ಲಿ ನೀಡದ ಸೌಲಭ್ಯವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸಿ.ಶ್ರೀಧರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಆರ್. ಕೃಷ್ಣಮೂರ್ತಿ, ಉಪ ಆಯುಕ್ತೆ ವರ್ಷಾ, ಕಾರ್ಯದರ್ಶಿ ನಾಗರಾಜು, ಆರೋಗ್ಯಾಧಿಕಾರಿ ವೆಂಕಟೇಶ್, ಸಫಾಯಿ ಕರ್ಮಚಾರಿ ಸದಸ್ಯ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







