ಕಾಮಗಾರಿ ಪೂರ್ಣಗೊಳ್ಳದೇ ಅಂಬೇಡ್ಕರ್ ಭವನ ಉದ್ಘಾಟನೆಗೆ ಅವಕಾಶ ಇಲ್ಲ: ನಟರಾಜು

ಕೊಳ್ಳೇಗಾಲ, ಡಿ.14: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿಯು ಪೂರ್ಣ ಗೊಳಿಸದೆ ಉದ್ಘಾಟನೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ದಲಿತ ಮುಖಂಡ ನಟರಾಜು ಮಾಳಿಗೆ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ವತಿಯಿಂದ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಭವನದ ಕಾಮಗಾರಿಯು ಶೇ.60 ರಷ್ಟು ಪೂರ್ಣಗೊಂಡಿದೆ. ಇನ್ನೂ ಶೇ.40 ರಷ್ಟು ಕಾಮಗಾರಿ ನಡೆಯಬೇಕಾಗಿರುವುದರಿಂದ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳ ಪ್ರತಿನಿಧಿಯನ್ನು ಕಳುಹಿಸಿ ಭವನ ಕಾಮಗಾರಿಯನ್ನು ಪರಿಶೀಲನೆ ಮಾಡಿ ಬಳಿಕ ಉದ್ಘಾಟನೆ ಮಾಡಲಿ ಎಂದು ಮನವಿ ಮಾಡಿದರು.
ಕಾಮಗಾರಿ ಪೂರ್ಣಗೊಳಿಸದೇ ಯಾವ ಉದ್ದೇಶಕ್ಕಾಗಿ ಅಂಬೇಡ್ಕರ್ ಭವನದ ಉದ್ಘಾಟನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಕಾಮಗಾರಿ ಯನ್ನು ಪೂರ್ಣಗೊಳಿಸಿ ಅಥವಾ ಜಿಲ್ಲಾಧಿಕಾರಿಯ ಅಕೌಂಟ್‌ನಲ್ಲಿ ಎರಡು ಕೋಟಿ ರೂ. ಹಣವನ್ನು ಭವನದ ಕಾಮಗಾರಿಗೆ ಇಡುವ ಮೂಲಕ ಉದ್ಘಾಟನೆಯನ್ನು ಮಾಡಲಿ ಎಂದರು.
ಸಂಘದ ಉಪಾಧ್ಯಕ್ಷ ನಾಗರಾಜು ಮಾತನಾಡಿ, ಭವನಕ್ಕೆ ಮೂಲಭೂತ ಸೌಕರ್ಯಯನ್ನು ಒದಗಿಸದೇ ಉದ್ಘಾಟನೆ ಮಾಡಿದ್ದಲ್ಲಿ ದಲಿತ ಸಂಘಟನೆಗಳನ್ನು ಸೇರಿಸಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ಸಿದ್ದಾರ್ಥ, ಸ್ಮಾರಕ ಸಂಘದ ಅಧ್ಯಕ್ಷ ನಟರಾಜು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಶಿವಣ್ಣ, ಪುಟ್ಟಬುದ್ಧಿ, ಶಿವಸ್ವಾಮಿ, ಪಂಚಾಕ್ಷರಿ, ನಾಗಣ್ಣ, ಮಣಿ, ಕೃಷ್ಣಮೂರ್ತಿ, ರಾಜು, ರಾಚಪ್ಪಾಜಿ, ಮಾಣಿಕ್ಯ ಉಪಸ್ಥಿತರಿದ್ದರು







