ಅರ್ಜಿಗಳ ತ್ವರಿತ ವಿಲೇವಾರಿಗೆ ಕಂದಾಯ ಸಚಿವರ ಕಟ್ಟುನಿಟ್ಟಿನ ಸೂಚನೆ
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ

ಚಾಮರಾಜನಗರ, ಡಿ.14: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಕಂದಾಯ ಕಾನೂನು 94 ಎಬಿಸಿ ಹಾಗೂ 94 ಸಿಸಿ ಅರ್ಜಿಗಳ ವಿಲೇವಾರಿ ಸೇರಿದಂತೆ ಕಂದಾಯ ಇಲಾಖೆಯ ಇತರ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಈ ಹಿಂದೆ ಹಲವು ಕಡೆ ಭೂಮಿ ಇಲ್ಲದವರಿಗೆ ಭೂಮಿಯನ್ನು ಮಂಜೂರು ಮಾಡ ಲಾಗಿದೆ. ಫಲಾನುಭವಿಗಳು ಸಾಗುವಳಿ ಚೀಟಿ ಪಡೆದು ಅನುಭವದಲ್ಲಿದ್ದಾರೆ ಆದರೂ ಭೂಮಿ ಸರ್ವೇ ಮಾಡಿಸಿ ಹದ್ದುಬಸ್ತು ಗುರುತಿಸಿ ನೀಡಲಾಗಿಲ್ಲ ಎಂದು ಶಾಸಕರಾದ ಎಸ್.ಜಯಣ್ಣ, ಆರ್.ನರೇಂದ್ರ ಹಾಗೂ ಸಿ.ಪುಟ್ಟರಂಗಶೆಟ್ಟಿ ಸಚಿವರ ಗಮನ ಸೆಳೆದರು. ಈ ನಿಟ್ಟಿನಲ್ಲಿ ದರಖಾಸ್ತು ಸೇರಿದಂತೆ ಅರ್ಹ ಜಮೀನುಗಳು ಸಾಗುವಳಿಯಾಗುತ್ತಿದ್ದರೆ ಅವುಗಳನ್ನು ಪಕ್ಕಪೋಡಿ ಮಾಡಿ ಹಕ್ಕುದಾರರಿಗೆ ಹಂಚಿಕೆ ಮಾಡಬೇಕು ಎಂದು ಸಚಿವ ಕಾಗೋಡು ಸೂಚಿಸಿದರು.
ಅದಿವಾಸಿಗಳು ಹಾಗೂ ಇತರ ವರ್ಗದವರಿಗೆ ಮಂಜೂರಾಗಿರುವ ಭೂಮಿಯನ್ನು ಕಂದಾಯ ಇಲಾಖೆ ಜೊತೆ ಗೂಡಿ ಸರ್ವೇ ಮಾಡಿಸಬೇಕು. ಹಕ್ಕುದಾರರಿಗೆ ಅಗತ್ಯ ಅನುಕೂಲಗಳನ್ನು ನಿಯಮಾನುಸಾರ ಕಲ್ಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ದುರಸ್ತು ಇನ್ನಿತರ ಕೆಲಸ ಮಾಡುವುದು ತಹಶೀಲ್ದಾರರ ಮುಖ್ಯ ಕರ್ತವ್ಯವಾಗಿದೆ. ನಿವೇಶನ ರಹಿತರನ್ನು ಪಟ್ಟಿಮಾಡಿ ಅದನ್ನು ಪ್ರಕಟಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕಳುಹಿಸಬೇಕು ಎಂದರು.
ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕೆ ಭೂಮಿ ಗುರುತಿಸಿ ನೀಡಬೇಕು. ಸರಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿಯಾಗಿಯಾದರೂ ಖರೀದಿಸಿ ಸ್ಮಶಾನಕ್ಕೆ ಅದ್ಯತೆ ಮೇರೆಗೆ ಭೂಮಿ ನೀಡಬೇಕು. ಈ ಬಗ್ಗೆ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ನೀಡಬೇಕು ಎಂದು ಕಂದಾಯ ಸಚಿವರು ನಿರ್ದೇಶನ ನೀಡಿದರು.
ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯ ಶಾಸಕರು, ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಆಯಾ ಭಾಗದ ಜನಪ್ರತಿನಿಧಿಗಳನ್ನು ಅಹ್ವಾನಿಸಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮುಂದಾಗಬೇಕೆಂದು ಕಂದಾಯ ಸಚಿವರು ಸೂಚಿಸಿದರು. ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಭೂ ಪ್ರಕರಣ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಪ್ರಕ್ರಿಯೆ ಚುರುಕಾಗಿ ನಿರ್ವಹಿಸಲು ಅಧಿಕಾರಿಗಳು ಮುಂದಾಗಬೇಕು. ವಿಳಂಬ ಧೋರಣೆ ಅನುಸರಿಸಬಾರದು ಎಂದರು.
ಸಕ್ಕರೆ, ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನ ಕುಮಾರಿ ಉರುಫ್ ಗೀತಾ ಮಹದೇವಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರ, ಉಪಾಧ್ಯಕ್ಷ ಜೆ.ಯೋಗೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಎಸ್.ಜಯಣ್ಣ, ತಾಪಂ ಅಧ್ಯಕ್ಷ ಎಚ್.ವಿ.ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಹೇಲ್ ಅಲಿಖಾನ್, ಜಿಪಂ ಕೈಗಾರಿಕೆ ಹಾಗೂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್ ಕುಮಾರ್ ಮೀನ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಫೌಝಿಯಾ ತರನಂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.







