ಬಂಟ್ವಾಳ: ವಸತಿ ಮಂಜೂರಾತಿ ಪತ್ರ ವಿತರಣೆ
'ಸರ್ವರಿಗೂ ಸೂರು ಸರಕಾರದ ಆದ್ಯತೆ'

ಬಂಟ್ವಾಳ, ಡಿ. 15: ಬಸವ ವಸತಿ ಯೋಜನೆ ಸಹಿತ ರಾಜೀವ ಗಾಂಧಿ ವಸತಿ ನಿಗಮ ಮತ್ತಿತರ ಯೋಜನೆಯಡಿ ಜನತೆಗೆ ಮನೆ ನಿವೇಶನ ಜೊತೆಗೆ ಸರಕಾರವು ವಸತಿ ನಿರ್ಮಿಸಲು ಕೂಡಾ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ರಾಜೀವ ಗಾಂಧಿ ವಸತಿ ನಿಗಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ ವಸತಿ ಮಂಜೂರಾತಿ ಪತ್ರವನ್ನು ಗುರುವಾರ ಸಂಜೆ ವಿತರಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಕಳೆದ 60 ವರ್ಷಗಳ ಹಿಂದೆ ನಿವೇಶನರಹಿತ ಕುಟುಂಬಗಳ ಸಂಖ್ಯೆ ಗರಿಷ್ಟ ಪ್ರಮಾಣದಲ್ಲಿದ್ದವು. ಇದು ಕ್ರಮೇಣ ಹಂತ ಹಂತವಾಗಿ ಸಾಮಾಜಿಕ ಬದಲಾವಣೆ ಮೂಲಕ ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ವಸತಿ ನಿರ್ಮಿಸಲು ಕೂಡಾ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಪುರಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು 10 ಕೋಟಿ ರೂ. ಗೂ ಮಿಕ್ಕಿ ಅನುದಾನ ಒದಗಿಸಿದ್ದಾರೆ ಎಂದರು.
ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಪ್ರಾಸ್ತಾವಿಕ ಮತನಾಡಿ, ರಾಜೀವ ಗಾಂಧಿ ವಸತಿ ನಿಗಮ ಯೋಜನೆಯಡಿ ವಸತಿ ಮಂಜೂರಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ 1.20ಲಕ್ಷ ರೂ. ಮತ್ತು ಕೇಂದ್ರ ಸರಕಾರದಿಂದ 1.50 ಲಕ್ಷ ರೂ. ಹೀಗೆ ಒಟ್ಟು 2.70ಲಕ್ಷ ರೂ. ವೆಚ್ಚದಲ್ಲಿ ಒಟ್ಟು 700 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಲು ನಾಲ್ಕು ಹಂತದಲ್ಲಿ ಸಹಾಯಧನ ಬಿಡುಗಡೆಯಾಗುತ್ತದೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಮೇಲ್ವಿಚಾರಕಿ ಉಮಾವತಿ, ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಜಗದೀಶ ಕುಂದರ್, ಪ್ರವೀಣ ಬಿ., ಮಹಮ್ಮದ್ ಶರೀಫ್, ನಾರ್ಬರ್ಟ್ ಡಿಸೋಜ, ವಸಂತಿ ಚಂದಪ್ಪ, ಜೆಸಿಂತಾ ಡಿಸೋಜ ಮತ್ತು ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.







