ಅಂತಾರಾಷ್ಟ್ರೀಯ ಯುವ ವಿನಿಮಯ ಸಮ್ಮೇಳನದಲ್ಲಿ ಮಂಗಳೂರಿನ ರಘುವೀರ್ ಸೂಟರ್‌ಪೇಟೆ

ಮಂಗಳೂರು, ಡಿ. 15: ಇಂಡೋನೇಷ್ಯಾದ ಝಕಾರ್ತದಲ್ಲಿ ನಡೆಯುತ್ತಿರುವ ಒಂದು ತಿಂಗಳ ಅಂತಾರಾಷ್ಟ್ರೀಯ ಯುವ ವಿನಿಮಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ದೇಶದ 5 ಮಂದಿ ಪ್ರತಿನಿಧಿಗಳಲ್ಲಿ ರಾಜ್ಯದಿಂದ ಮಂಗಳೂರಿನ ರಘುವೀರ್ ಸೂಟರ್‌ಪೇಟೆ ಒಬ್ಬರು.
ಭಾರತ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ನೆಹರು ಯುವ ಕೇಂದ್ರವು ಭಾರತದಿಂದ ಇವರನ್ನು ಆಯ್ಕೆ ಮಾಡಿ ಸಮ್ಮೇಳನಕ್ಕೆ ಕಳುಹಿಸಿದೆ.
ಜಪಾನ್, ಚೈನಾ, ಶ್ರೀಲಂಕಾ, ಆಸ್ಟ್ರೇಲಿಯಾ, ಜರ್ಮನಿ ಸೇರಿಂದರೆ ಒಟ್ಟು 14 ದೇಶಗಳ 90 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ನ.17ರಂದು ಆರಂಭಗೊಂಡು ಡಿ.18ರಂದು ಕೊನೆಗೊಳ್ಳಲಿದೆ.
ಯುವ ಸಬಲೀಕರಣ ಹಾಗು ಸ್ವಯಂ ಸೇವೆಯ ಬಗ್ಗೆ ವಿಚಾರ ವಿನಿಮಯ ನಡೆಸಿ ಪ್ರೋತ್ಸಾಹ ನೀಡುವುದು ಈ ಸಮ್ಮೇಳನದ ಉದ್ದೇಶ. ಈ ಯುವ ವಿನಿಮಯ ಸಮ್ಮೇಳನದಲ್ಲಿ ಭಾರತೀಯ ಮತ್ತು ಇಂಡೋನೇಷ್ಯಾದಲ್ಲಿನ ಯುವ ಮತ್ತು ಸ್ವಯಂಸೇವೆಯ ಸಮಾನ ಮತ್ತು ವಿಭಿನ್ನತೆ, ಇಂಡೋನೇಷ್ಯಾದಲ್ಲಿನ ಸ್ವಯಂ ಸೇವಕರ ಸಾಂಪ್ರದಾಯಿಕ ಸ್ವರೂಪ ಮತ್ತು ಇತ್ತೀಚಿನ ಯುವ-ನೇತೃತ್ವದ ಸ್ವಯಂ ಸೇವೆಯ ವಿವಿಧ ನಾವೀನ್ಯತೆಗಳ ಬಗ್ಗೆ ಮಾಹಿತಿ ಪಡೆಯುವುದು. ಎರಡೂ ದೇಶಗಳಲ್ಲಿನ ಸ್ವಯಂಸೇವೆಯ ಉತ್ತಮ ವಿಚಾರಗಳನ್ನು ಮತ್ತು ಮೂಲಭೂತ ಸೌಕರ್ಯವನ್ನು ಸುಧಾರಿಸಲು ಶಿಫಾರಸುಗಳ ಬಗ್ಗೆ ಹಂಚಿಕೊಳ್ಳಲಾಗುತ್ತಿದೆ ಎಂದು ರಘುವೀರ್ ಸೂಟರ್‌ಪೇಟೆ ತಿಳಿಸಿದ್ದಾರೆ.
ರಘುವೀರ್ ಸೂಟರ್‌ಪೇಟೆ ಸಾಮಾಜಿಕ ಕಾರ್ಯಕರ್ತ, ಸಕ್ರೀಯ ಯುವ ನಾಯಕರಾಗಿ ಯುವ ಸಂಘಟನೆಯನ್ನು ಬಲಪಡಿಸಲು ಹಲವಾರು ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರ ಸಾಮಾಜಿಕ ಕಾಳಜಿಯನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.







