ಕಲ್ಲುಗುಂಡಿ-ದಬ್ಬಡ್ಕ ರಸ್ತೆ ಕಾಮಗಾರಿಗೆ ಆಗ್ರಹ: ಗ್ರಾಮಸ್ಥರಿಂದ ಪ್ರತಿಭಟನೆ

ಮಡಿಕೇರಿ ಡಿ.15 :ದಕ್ಷಿಣ ಕನ್ನಡದಿಂದ ತಲಕಾವೇರಿಗೆ ಸಮೀಪದ ಮಾರ್ಗವಾಗಬಲ್ಲ, ಅರ್ಧಕ್ಕೆ ಸ್ಥಗಿತಗೊಂಡಿರುವ ಕಲ್ಲುಗುಂಡಿ-ದಬ್ಬಡ್ಕ ರಸ್ತೆ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಆಗ್ರಹಿಸಿ ದಬ್ಬಡ್ಕ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಸಾಂಕೇತಿಕ ಮೌನ ಪ್ರತಿಭಟನೆ ನಡೆಸಿದರು.
ಕಾಂತಬೈಲು ದಬ್ಬಡ್ಕದ ಶ್ರೀರಾಮ ಯುವಕ ಸಂಘದ ಅಧ್ಯಕ್ಷ ಕೆ.ಜೆ. ಜಗನ್ ಖಜಾಂಚಿ ಬೊಳ್ತಜೆ ಪ್ರಜ್ವಲ್ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು ಗಾಂಧಿ ಮಂಟಪದಿಂದ ಜಿಲ್ಲಾಡಳಿತ ಭವನದವರೆಗೆ ಘೋಷಣೆಗಳ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿ, ಕೆಲ ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರ ಬಳಿಗೆ ಬಂದ ಜಿಲ್ಲಾಧಿüಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಖಜಾಂಚಿ ಬೊಳ್ತಜೆ ಪ್ರಜ್ವಲ್, ಚೆಂಬು ಪಂಚಾಯ್ತಿಯ ಉಪಗ್ರಾಮವಾದ ದಬ್ಬಡ್ಕಕ್ಕೆ ಕಲ್ಲುಗುಂಡಿಯಿಂದ 10 ಕಿ.ಮೀ. ದೂರವಿದ್ದು, ಈ ರಸ್ತೆ ಚೆಟ್ಟಿಮಾನಿಯಲ್ಲಿ ಕೊನೆಗೊಳ್ಳುತ್ತದೆ. ಈ ರಸ್ತೆಯನ್ನು ನಿರ್ಮಿಸಿದಲ್ಲಿ ದಕ್ಷಿಣ ಕನ್ನಡ ವಿಭಾಗದಿಂದ ತಲಕಾವೇರಿ ಕ್ಷೇತ್ರಕ್ಕೆ ತೆರಳುವವರಿಗೆ ಅಂದಾಜು 40 ಕಿ.ಮೀ.ನಷ್ಟು ಪ್ರಯಾಣ ಕಡಿಮೆಯಾಗುತ್ತದೆಯಲ್ಲದೆ, ಗ್ರಾಮಸ್ಥರ ಸಂಚಾರಕ್ಕೂ ಅನುಕೂಲತೆಯನ್ನು ಒದಗಿಸಲಿದೆಯೆಂದು ತಿಳಿಸಿದರು.
ದಬ್ಬಡ್ಕ ಗ್ರಾಮದಲ್ಲಿ 182 ಮನೆಗಳಿದ್ದು, 700 ಮಂದಿ ವಾಸವಿದ್ದಾರೆ. ಇಲ್ಲಿನ ನಿವಾಸಿಗಳ ಸಂಚಾರಕ್ಕೆ ಅಗತ್ಯವಿರುವ ಹಾದಿಯ ಅಂದಾಜು 5 ಕಿ.ಮೀ. ಮಾತ್ರ ಡಾಂಬರೀಕರಣವಾಗಿದ್ದು, ಉಳಿದ ರಸ್ತೆಯ ಡಾಂಬರೀಕರಣ 2009ರ ಅವಧಿಯಲ್ಲಿ ಆರಂಭಗೊಂಡಿತಾದರು ಕೆಲವೇ ದಿನಗಳಲ್ಲಿ ಅದು ಸ್ಥಗಿತಗೊಂಡಿದೆ. ಈ ಹಾದಿಯ ನಿರ್ಮಾಣಕ್ಕೆ ಅರಣ್ಯ ಇಲಾಖೆಯೂ ತನ್ನ ಸಮ್ಮತಿಯನ್ನು ಲಿಖಿತ ಮೂಲಕ ನೀಡಿದೆಯೆಂದು ತಿಳಿಸಿದ ಪ್ರಜ್ವಲ್, 2017-18ನೇ ಸಾಲಿನಲ್ಲಿ ರಸ್ತೆ ಕಾಮಗಾರಿಗೆ 1.45 ಕೋಟಿಯ ಪ್ರಸ್ತಾವನೆಯನ್ನು ಕ್ಷೇತ್ರದ ಶಾಸಕರ ಮೂಲಕ ನಬಾರ್ಡ್‍ಗೆ ಕಳುಹಿಸಲಾಗಿದ್ದರು ಇಲ್ಲಿಯವರೆಗೆ ಸ್ಪಂದನ ದೊರಕಿಲ್ಲ. ಈ ಹಿಂದಿನಿಂದಲೂ ದಬ್ಬಡ್ಕಕ್ಕೆ ಯೋಗ್ಯ ರಸ್ತೆಯನ್ನು ಒದಗಿಸುವಂತೆ ಮನವಿ ಮಾಡಿಕೊಂಡು ಬಂದಿದ್ದರು ಯಾವುದೇ ಪ್ರಯೋಜನವಾಗಿಲ್ಲವೆಂದು ತಿಳಿಸಿದರು.
ಈ ವರ್ಷಾಂತ್ಯದ ಒಳಗಾಗಿ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಪ್ರಜ್ವಲ್, ಇಲ್ಲದಿದ್ದಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ಮತ್ತೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಮತ್ತು ಚುನಾವಣಾ ಬಹಿಷ್ಕರಕ್ಕೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು, ದಬ್ಬಡ್ಕ ಗ್ರಾಮದ ಸಮಸ್ಯೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಹೊಸೂರು ಗಿರೀಶ್, ಸದಸ್ಯ ಯತೀಶ್ ಕೆದಂಬಾಡಿ ಸೇರಿದಂತೆ ಹಲ ಗ್ರಾಮಸ್ಥರು ಪಾಲ್ಗೊಂಡಿದ್ದರು.







