ಹಕ್ಕುಪತ್ರಕ್ಕಾಗಿ ಆಗ್ರಹ : ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಪ್ರತಿಭಟನೆ

ಮಡಿಕೇರಿ ಡಿ.15: ಬಡವರ್ಗದ ಸಾಗುವಳಿ ಭೂಮಿಗೆ ಮತ್ತು ವಾಸಿಸುತ್ತಿರುವ ಮನೆಯ ನಿವೇಶನಕ್ಕೆ ಹಕ್ಕುಪತ್ರವನ್ನು ನೀಡಬೇಕು ಹಾಗೂ ಪಾಲೇಮಾಡಿನಲ್ಲಿ ಕ್ರಿಕೆಟ್ ಮೈದಾನಕ್ಕೆ ನೀಡಿರುವ ಸ್ಮಶಾನದ ಜಾಗವನ್ನು ಸ್ಮಶಾನಕ್ಕಾಗಿ ಮರಳಿಸಬೇಕು ಎಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.
ಸ್ಥಳಕ್ಕಾಗಮಿಸಿದ ಕಂದಾಯ ಸಚಿವರು ಪ್ರತಿ ಗ್ರಾಮದಲ್ಲಿ ಸ್ಮಶಾನ ಇರಬೇಕೆನ್ನುವುದು ಸರ್ಕಾರದ ನಿಲುವಾಗಿದ್ದು, ಪಾಲೇಮಾಡಿನಲ್ಲಿ ಈ ಹಿಂದೆ ಇದ್ದ ಸ್ಮಶಾನ ಜಾಗವನ್ನು ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ನೀಡಿದ್ದರೆ ಅದನ್ನು ಮರಳಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಮಿತಿಯ ಸಂಚಾಲಕ ಡಿ.ಎಸ್.ನಿರ್ವಾಣಪ್ಪ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಹಾಗೂ ಪಾಲೇಮಾಡು ನಿವಾಸಿಗಳು ಪ್ರತಿಭಟನೆ ನಡೆಸಿ ಜಿಲ್ಲೆಯ ವಿವಿಧೆಡೆಗಳಲ್ಲಿ ದಲಿತರು, ಆದಿವಾಸಿಗಳು, ಕೃಷಿ ಕೂಲಿ ಕಾರ್ಮಿಕರು ನಿವೇಶನ ಹಕ್ಕುಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಆರೋಪಿಸಿದರು.
ಸೋಮವಾರ ಪೇಟೆ ತಾಲ್ಲೂಕಿನ 6ನೇ ಹೊಸಕೋಟೆಯಲ್ಲಿ ಕಳೆದ ಎರಡು ದಶಕಗಳಿಂದ ಕೃಷಿ ನಡೆಸಿಕೊಂಡು ಬದುಕು ಸಾಗಿಸುತ್ತಿರುವ ಬಡಮಂದಿಯ ಭೂಮಿಯನ್ನು ಪೊಲೀಸ್ ಮೈದಾನ ನಿರ್ಮಾಣಕ್ಕೆ ನೀಡಲಾಗಿದೆ. ಇದನ್ನು ರದ್ದುಗೊಳಿಸಬೇಕು ಮತ್ತು ಚೆರಿಯಪರಂಬುವಿನ ಸರ್ಕಾರಿ ಜಾಗದಲ್ಲಿ ನೆಲೆ ನಿಂತಿರುವ 200 ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ನಿರ್ವಾಣಪ್ಪ ಒತ್ತಾಯಿಸಿದರು.
ವೀರಾಜಪೇಟೆ ತಾಲ್ಲೂಕಿನ ತೆರ್ಮೆಕಾಡುವಿನಲ್ಲಿ ನೂರಕ್ಕೂ ಹೆಚ್ಚಿನ ದಲಿತ ಆದಿವಾಸಿಗಳಿಗೆ ಹಕ್ಕುಪತ್ರ ದೊರಕದಿರುವ ಬಗ್ಗೆ ಸಚಿವರ ಗಮನ ಸೆಳೆದರು.
:: ಮಾರ್ಚ್ ಒಳಗೆ ಹಕ್ಕುಪತ್ರ ::
ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಸಚಿವ ಕಾಗೋಡು ತಿಮ್ಮಪ್ಪ ಅವರು, 94ಸಿ ಯಡಿ ಅರ್ಜಿ ಸಲ್ಲಿಸುವವರಿಗೆ ಕಾಲಾವಕಾಶವನ್ನು ಫೆಬ್ರವರಿಯವರೆಗೆ ವಿಸ್ತರಿಸಲಾಗಿದೆ ಎಂದರು. 2012ರ ಒಳಗೆ ಒತ್ತುವರಿ ಮಾಡಿದವರಿಗೆ ಈ ಹಿಂದೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದನ್ನು 2015ರ ವರೆಗೆ ಎಂದು ಬದಲಿಸಲಾಗಿದ್ದು, ಈ ನೂತನ ಆದೇಶದ ಅನ್ವಯ ಹಕ್ಕುಪತ್ರಗಳನ್ನು ಮಾರ್ಚ್ ಒಳಗೆ ಒದಗಿಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು.
ರಾಜ್ಯ ಸರ್ಕಾರದ್ದು ಬಡವರ ಪರವಾದ ಧ್ವನಿಯೆಂದು ಸ್ಪಷ್ಟಪಡಿಸಿದ ಸಚಿವ ಕಾಗೋಡು ತಿಮ್ಮಪ್ಪ, ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಹಕ್ಕುಪತ್ರಕ್ಕಾಗಿ ಇರುವ ಬೇಡಿಕೆಯ ಪಟ್ಟಿಯನ್ನು ಮಾಡಿ ಒದಗಿಸಿದಲ್ಲಿ, ಹಕ್ಕುಪತ್ರ ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಮಿತಿ ಸದಸ್ಯರಾದ ಮೊಣ್ಣಪ್ಪ, ಅಮಿನ್ ಮೊಹಿಸಿನ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.







