ಬಿಜೆಪಿಯ 'ಜೈಲ್ ಭರೋ' ಹೊಸ ನಾಟಕ : ಇಂಧನ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ. 15: ಬಿಜೆಪಿ ಅಂದರೆ ಸುಳ್ಳಿನ ಕಂತೆ, ಇದೀಗ 'ಜೈಲ್ ಭರೋ' ಎನ್ನುವ ಹೊಸ ನಾಟಕ ಆರಂಭಿಸಲು ಹೊರಟಿದ್ದು, ಇದು ಬಿಜೆಪಿ ಸಂಸ್ಕೃತಿಯ ಪ್ರತೀಕ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸದಾಶಿವನಗರದಲ್ಲಿ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾಲ್ಕುವರೆ ವರ್ಷ ಸುಮ್ಮನಿದ್ದ ಬಿಜೆಪಿ ಮುಖಂಡರು ಇದೀಗ ಹೋರಾಟ ಆರಂಭಿಸಿದ್ದು ಏಕೆ? ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಸೂಚನೆ ಹಿನ್ನೆಲೆಯಲ್ಲಿ ಚಳವಳಿ ನಡೆಸುತ್ತಿರುವುದಾಗಿ ಸಂಸದ ಪ್ರತಾಪ ಸಿಂಹ ಸ್ಪಷ್ಟಪಡಿಸಿದ್ದಾರೆ ಎಂದು ಟೀಕಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸುಳ್ಳನ್ನು ಪದೇ ಪದೇ ಹೇಳಿ ಅಂತ ತನ್ನ ಪಕ್ಷದ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಬಿಜೆಪಿಯವರೇನು ಎಂದು ರಾಜ್ಯದ ಜನತೆಗೆ ಹೇಳುವ ಅಗತ್ಯವಿಲ್ಲ ಎಂದು ಶಿವಕುಮಾರ್ ಇದೇ ವೇಳೆ ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜ್ಯ ಪ್ರವಾಸ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಕೈಗೊಳ್ಳಲಿರುವ ಯಾತ್ರೆ ಎರಡನ್ನೂ ಪಕ್ಷದ ಹೈಕಮಾಂಡ್ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ. ಈ ಸಂಬಂಧ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಶಿವಕುಮಾರ್ ಇದೇ ವೇಳೆ ಸ್ಪಷ್ಟಪಡಿಸಿದರು.







