ಶಾಸಕರ ಒತ್ತಡದಿಂದಪಟ್ಟಿಯಿಂದ ಮತದಾರರ ಹೆಸರು ತೆರವು: ಮಾಜಿ ಶಾಸಕ ಕೆ.ಸುರೇಶ್‍ಗೌಡ ಆರೋಪ

ಮಂಡ್ಯ, ಡಿ.15: ಶಾಸಕ ಎನ್.ಚಲುವರಾಯಸ್ವಾಮಿ ಅವರ ಒತ್ತಡಕ್ಕೆ ಮಣಿದಿರುವ ತಾಲೂಕು ಆಡಳಿತ ಸುಮಾರು 6,437 ಮತದಾರರನ್ನು ಕಾನೂನುಬಾಹಿರವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ ಎಂದು ಮಾಜಿ ಶಾಸಕ ಕೆ.ಸುರೇಶ್‍ಗೌಡ ಆರೋಪಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರಿಗೆ ದೂರು ನೀಡಿದ ನಂತರ, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜೆಡಿಎಸ್‍ಗೆ ಹೆಚ್ಚು ಮತ ಲಭಿಸಿದ ಬೂತ್‍ಗಳನ್ನು ಗುರಿಯಾಗಿರಿಸಿಕೊಂಡು ಮತದಾರರ ಪಟ್ಟಿಯಿಂದ ಹಲವರನ್ನು ಕೈಬಿಡಲಾಗುತ್ತಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ತನಗೆ ಅನಾನುಕೂಲವಾಗಬಹುದೆಂದು ಜೆಡಿಎಸ್ ಮತದಾರರನ್ನು ಶಾಸಕ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಒತ್ತಡ ತಂದು ಪಟ್ಟಿಯಿಂದ ಕೈಬಿಡುವಂತೆ ಮಾಡಿದ್ದಾರೆ. ತಮ್ಮ ಸೂಚನೆ ಪಾಲಿಸದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ತಾಲೂಕಿನ ಬಹುತೇಕ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿದ್ದಾರೆ. ಜೀವನೋಪಾಯಕ್ಕಾಗಿ ತಾಲೂಕಿನ ಅನೇಕ ಮಂದಿ ಬೆಂಗಳೂರು, ಇತರೆಡೆ ಜೀವನ ಸಾಗಿಸುತ್ತಿದ್ದಾರೆ. ಇದೊಂದೇ ಕಾರಣವನ್ನಿಟ್ಟುಕೊಂಡು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಸುಮಾರು 20 ರಿಂದ 30 ಸಾವಿರ ಹೆಸರನ್ನು ಕೈಬಿಡುವ ಹುನ್ನಾರವಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಬೆಂಬಲಿತರರು ಅರ್ಜಿ ಸಲ್ಲಿಸಿದರೆ ತಕ್ಷಣ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಅಧಿಕಾರಿಗಳು, ಜೆಡಿಎಸ್ ಬೆಂಬಲಿತ ಮತದಾರರನ್ನು ಸೇರಿಸಲು ಹಲವು ಸಬೂಬು ಹೇಳುತ್ತಾರೆ. ಕರ್ತವ್ಯಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಶಾಸಕರ ಸೋದರನ ಪುತ್ರ ಮತ್ತು ಆಪ್ತ ಶಿವರಾಜ್ ಎಂಬುವರು ತಾಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ರಸ್ತೆ ಕಾಮಗಾರಿಗಳಿಗೆ ತಮ್ಮಲ್ಲೇ ಜಲ್ಲಿ ಖರೀದಿಸುವಂತೆ ಗುತ್ತಿಗೆದಾರರಿಗೆ ಒತ್ತಡ ಹಾಕಲಾಗುತ್ತಿದೆ. ದೂರು ನೀಡಿದರೆ, ಅದಿಕಾರಿಗಳು ಕಾಟಾಚಾರದ ದಾಳಿ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಸುರೇಶ್‍ಗೌಡ ಆರೋಪಿಸಿದರು.
ತಾಲೂಕಿನಲ್ಲಿ ಸದ್ದಾಂ ಹುಸೇನ್ ಆಡಳಿತ ನಡೆಯುತ್ತಿದೆ. ಕ್ಷೇತ್ರದಲ್ಲಿ ಶಾಸಕರ ಬೆಂಬಲಿಗರ ಹೊರತುಪಡಿಸಿ ಬೇರೆ ಯಾರೂ ಫ್ಲೆಕ್ಸ್ ಅಳವಡಿಸುವಂತಿಲ್ಲ. ಒಂದು ವೇಳೆ ಅಳವಡಿಸಿದರೆ ಅಧಿಕಾರಿಗಳು ಬಂದು ತೆರವುಗೊಳಿಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಹಾಗು ನಾಗಮಂಗಲ ತಾಲೂಕು ಅಧ್ಯಕ್ಷ ತೂಬಿನಕೆರೆ ಜವರೇಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್‍ಗೆ ನಾನೆಂದೂ ಅನ್ಯಾಯ ಮಾಡಿಲ್ಲ. ಪಕ್ಷಕ್ಕೆ ನಿಷ್ಠೆಯಿಂದ ದುಡಿದರೂ ಕಡೆಗಣಿಸಲಾಯಿತು. ಬೆಂಬಲಿಗರ ಒತ್ತಾಸೆ, ದೇವೇಗೌಡರ ಆಹ್ವಾನದ ಮೇರೆಗೆ ಜೆಡಿಎಸ್ ಸೇರಿದ್ದು, ನಿಷ್ಠೆಯಿಂದ ದುಡಿಯುತ್ತೇನೆ.
-ಕೆ.ಸುರೇಶ್‍ಗೌಡ







