"ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬಳಕೆ ಬೇಡ"
ಮತಪತ್ರಗಳನ್ನೇ ಬಳಸಲು ಚು.ಆಯೋಗಕ್ಕೆ ಸಿದ್ದರಾಮಯ್ಯ ಪತ್ರ

ರಾಯಚೂರು, ಡಿ.15: ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪತ್ರಗಳನ್ನೇ ಬಳಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಮತಮತ್ರಗಳೇ ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.
ರಾಜಕೀಯ ಅಧಿಕಾರ ಮತ್ತು ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈಯ್ಯಲ್ಲಿದ್ದು, ತಮಗೆ ಬೇಕಾದವರನ್ನು ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತಾರೆ. ಹೀಗಾಗಿ ಜನತೆಯ ಮತಗಳು ದುರ್ಬಳಕೆಯಾಗುವ ಅವಕಾಶ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಾಗ ಮಾಯಾವತಿ, ಅಖಿಲೇಶ್ ಯಾದವ್, ಹಾಗೂ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿಯೂ ವಿದ್ಯುನ್ಮಾನ ಮತಯಂತ್ರಗಳ ಕಾರ್ಯವೈಖರಿ ಕುರಿತು ಅನುಮಾನ ವ್ಯಕ್ತಪಡಿಸಿದರು. ಹೀಗಾಗಿ ಹಳೆಯ ಪದ್ಧತಿಯಂತೆ ಮತಪತ್ರಗಳ ಮಾದರಿಯಲ್ಲಿಯೇ ಚುನಾವಣೆ ನಡೆಯುವಂತೆ ಮತದಾರರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಮೆರಿಕ ಮತ್ತು ಜರ್ಮನಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಿದರು. ಆದರೆ, ಆ ಮತಯಂತ್ರಗಳ ಮೇಲೆ ವಿಶ್ವಾಸ ಮೂಡದ ಕಾರಣ ಮತ್ತೆ ಮತ ಪತ್ರಗಳ ಮೊರೆ ಹೋದರು. ಹೀಗಾಗಿ ರಾಜ್ಯದಲ್ಲೂ ಮತಪತ್ರಗಳನ್ನೇ ಬಳಸುವುದು ಸೂಕ್ತ. ಈ ಕುರಿತು ನಾನು ತಜ್ಞರ ಜೊತೆಗೂ ಮಾತುಕತೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.
ಎಂಎಂಎಲ್‌ನಲ್ಲಿ ಹಗರಣ ನಡೆದಿಲ್ಲ :
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿರುವಂತೆ ಮೈಸೂರು ಮಿನರಲ್ಸ್ ನಲ್ಲಿ ಯಾವುದೇ ಹಗರಣ ನಡೆದಿಲ್ಲ. ಅವರಿಂದ ಯಾವ ದಾಖಲೆಗಳೂ ಬಿಡುಗಡೆ ಆಗುವುದಿಲ್ಲ. ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ಕೇಸು. ಆರೋಪ ಮಾಡುವುದು, ತಪ್ಪಿಸಿಕೊಂಡು ಹೋಗುವುದು ಅವರಿಗೆ ವಾಡಿಕೆಯಾಗಿದೆ. ಇದುವರೆಗೆ ಯಾವುದೇ ಆರೋಪವನ್ನೂ ಅವರು ಸಾಬೀತು ಮಾಡಿಲ್ಲ ಎಂದು ಅವರು ತಿರುಗೇಟು ನೀಡಿದರು.
ಹಿಮಾಚಲ ಮತ್ತು ಗುಜರಾತ್ ಸೇರಿದಂತೆ ಯಾವುದೇ ರಾಜ್ಯದ ಚುನಾವಣಾ ಫಲಿತಾಂಶ ಮತ್ತೊಂದು ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ.ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಫಲಿತಾಂಶ ಬೇರೆ ಬೇರೆ. ಅಲ್ಲಿಯ ವಿಷಯಗಳು, ಇಲ್ಲಿಯ ವಿಷಯಗಳೇ ಬೇರೆ. ಅನೇಕ ಬಾರಿ ಸಮೀಕ್ಷೆಗಳು ಸುಳ್ಳಾಗಿರುವ ಉದಾಹರಣೆಗಳಿವೆ ಎಂದು ಅವರು ಹೇಳಿದರು.
ಜೈಲಿಗೆ ಹೋಗಿದ್ದು ಸುಳ್ಳೇ :
ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಅವರೇ 42 ಕೇಸುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ,ಅದರಿಂದ ಮೊದಲು ಬಚಾವ್ ಆಗಿ ಬರಲಿ. ಅಧಿಕಾರ ತಪ್ಪಲಿದೆ ಎಂದು ಕಂಗಾಲಾಗಿರುವ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಕೀಳುಮಟ್ಟದ ಭಾಷೆಯನ್ನು ಬಳಸುತ್ತಿದ್ದಾರೆ. ಇದು ಬಿಜೆಪಿಯ ಸಾಂಸ್ಕೃತಿ ಎಂತಹ ಕೀಳುಮಟ್ಟದ್ದು ಎಂಬುದು ಜನತೆಗೆ ಈ ಮೂಲಕ ತಿಳಿಯಲಿ ಎಂದು ಅವರು ಹೇಳಿದರು.







