2,000 ರೂ.ವರೆಗಿನ ವ್ಯವಹಾರದ ಎಂಡಿಆರ್ ಶುಲ್ಕ ಮರುಪಾವತಿ: ಸರಕಾರ

ಹೊಸದಿಲ್ಲಿ, ಡಿ.15: ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರವು ಡೆಬಿಟ್ ಕಾರ್ಡ್, ಭೀಮ್ ಯುಪಿಐ ಅಥವಾ ಆಧಾರ್ ಮೂಲಕದ ಪಾವತಿ ವ್ಯವಸ್ಥೆಯಡಿ ಮಾಡಿದ 2,000 ರೂ.ವರೆಗಿನ ವ್ಯವಹಾರದ ಮೇಲಿನ ಎಂಡಿಆರ್ ಶುಲ್ಕವನ್ನು ಭರಿಸಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
2018ರ ಜನವರಿ 1ರಿಂದ ಮುಂದಿನ ಎರಡು ವರ್ಷಾವಧಿಗೆ ಮರ್ಚಂಟ್ ಡಿಸ್ಕೌಂಟ್ ರೇಟ್(ಎಂಡಿಆರ್) ಶುಲ್ಕವನ್ನು ಸರಕಾರ ಬ್ಯಾಂಕ್‌ಗಳಿಗೆ ಮರುಪಾವತಿ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದ ಸರಕಾರದ ಖಜಾನೆಗೆ 2,512 ಕೋಟಿ ರೂ. ಹೊರೆ ಬೀಳಲಿದೆ ಎಂದು ಸಚಿವರು ತಿಳಿಸಿದರು.
2,000 ರೂ.ವರೆಗಿನ ಮೊತ್ತದ ಎಲ್ಲಾ ವ್ಯವಹಾರಗಳ ಸಂದರ್ಭ ಗ್ರಾಹಕರಿಗೆ ಹಾಗೂ ವರ್ತಕರಿಗೆ ಎಂಡಿಆರ್ ಶುಲ್ಕದ ರೂಪದಲ್ಲಿ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಇದರಿಂದ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ ಎಂದವರು ಹೇಳಿದರು.
ಗ್ರಾಹಕರು ಡೆಬಿಟ್ ಕಾರ್ಡ್, ಭೀಮ್ ಯುಪಿಐ ಅಥವಾ ಆಧಾರ್ ಮೂಲಕದ ಪಾವತಿ ವ್ಯವಸ್ಥೆಯಡಿ ಪಾವತಿ ಮಾಡಿದಾಗ ವರ್ತಕರು ಎಂಡಿಆರ್ ಶುಲ್ಕವನ್ನು ಬ್ಯಾಂಕ್‌ಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ಹೆಚ್ಚಿನ ವರ್ತಕರು ನಗದು ವ್ಯವಹಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. 2018ರ ಜನವರಿ 1ರಿಂದ ಎಂಡಿಆರ್ ಶುಲ್ಕವನ್ನು (2,000 ರೂ.ವರೆಗಿನ ವ್ಯವಹಾರಕ್ಕೆ) ಸರಕಾರ ಬ್ಯಾಂಕ್‌ಗಳಿಗೆ ಪಾವತಿಸಲಿದೆ.
ಆರ್ಥಿಕ ಸೇವಾ ವಿಭಾಗದ ಕಾರ್ಯದರ್ಶಿ, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ, ರಾಷ್ಟ್ರೀಯ ಪಾವತಿ ಸಂಸ್ಥೆ (ಎನ್‌ಪಿಸಿಐ)ಯ ಸಿಇಒ ಒಳಗೊಂಡಿರುವ ಸಮಿತಿಯು ಉದ್ಯಮ ವೆಚ್ಚದ ಸ್ವರೂಪವನ್ನು ಪರಿಶೀಲಿಸಿ ಮರುಪಾವತಿಯ ಹಂತವನ್ನು ನಿರ್ಧರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.







