ಡಿ. 29ರಿಂದ ಉಡುಪಿ ಪರ್ಬ, ಅಡ್ವೆಂಚರ್ ಫೆಸ್ಟಿವಲ್
ಸಾಹಸಿ ಪ್ರವಾಸೋದ್ಯಮಕ್ಕೆ ಉಡುಪಿ ಸಜ್ಜು

ಉಡುಪಿ, ಡಿ.15:ಕಡಲ ತೀರದ ಸಾಹಸೀ ಪ್ರವಾಸೋದ್ಯಮಕ್ಕೆ ಉಡುಪಿ ಸಜ್ಜಾಗಿದ್ದು, ಇದೇ ಡಿ.29ರಿಂದ 31ರವರೆಗೆ ಉಡುಪಿ ಪರ್ಬ ಹಾಗೂ ಜಿಲ್ಲೆಯ ನಾನಾ ಕಡೆಗಳಲ್ಲಿ ಉಡುಪಿ ಅಡ್ವೆಂಚರ್ ಫೆಸ್ಟಿವಲ್‌ಗಳನ್ನು ಆಯೋಜಿಸಲಾ ಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯ ವೈಟ್‌ವಾಟರ್ ಹೊಟೇಲ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಉಡುಪಿ ಪರ್ಬದ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹಾಗೂ ಕರಾವಳಿ ಪ್ರವಾಸೋದ್ಯಮಗಳ ಸಂಘಟನೆಗಳು ಸಂಯುಕ್ತವಾಗಿ ವಿಶಿಷ್ಟವಾದ ಈ ಉತ್ಸವವನ್ನು ಹಮ್ಮಿಕೊಂಡಿವೆ ಎಂದರು.
ಉತ್ಸವದ ಸಂಘಟನೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 60 ಲಕ್ಷ ರೂ. ಹಾಗೂ ಪ್ರವಾಸೋದ್ಯಮ ಇಲಾಖೆ 15 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಉಳಿದ ವೆಚ್ಚವನ್ನು ದಾನಿಗಳ ಮೂಲಕ ಸಂಗ್ರಹಿಸಲಾಗುತ್ತದೆ. ರಾಜ್ಯದ ಒಟ್ಟು ಹತ್ತು ಕಡೆಗಳಲ್ಲಿ ಸಾಹಸಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಮೋದ್ ತಿಳಿಸಿದರು.
ದಾಂಡೇಲಿಯಲ್ಲಿ ರಿವರ್ ರಾಫ್ಟಿಂಗ್, ಚಿತ್ರದುರ್ಗದಲ್ಲಿ ಪರ್ವತಾರೋಹಣ ಕ್ರೀಡೆ, ಬೆಂಗಳೂರು ಸೇರಿದಂತೆ ಉಳಿದೆಡೆಗಳಲ್ಲಿ ವಿವಿಧ ಸಾಹಸೀ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಯುವಜನರಿಗೆ ಸಾಹಸಿ ಕ್ರೀಡೆಗಳನ್ನು ಪರಿಚಯಿಸಲಾಗುತ್ತಿದೆ. ಇವುಗಳು ಎಲ್ಲವೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಉತ್ಸವವಾಗಿರುತ್ತದೆ ಎಂದರು.
ಈ ನಿಟ್ಟಿನಲ್ಲಿ ಮಲ್ಪೆ ಬೀಚ್ ಅಲ್ಲದೇ, ಕಾಪು, ಒತ್ತಿನೆಣೆ, ಪಡುಬಿದ್ರಿ, ಪಡುವರಿ, ಕೋಟೇಶ್ವರ ಕೋಡಿ ಕಿನಾರ ಬೀಚ್‌ಗಳಲ್ಲೂ ವಿವಿಧ ಸಮುದ್ರ ಸಾಹಸಿ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಇದರೊಂದಿಗೆ ಮಣ್ಣಪಳ್ಳದಲ್ಲಿ ಶಿಲ್ಪಕಲಾ ಶಿಬಿರ, ಆದಿಉಡುಪಿಯಲ್ಲಿ ಹೆಲಿಟೂರಿಸಂ, ಕುದುರೆಮುಖ, ಹೆಬ್ರಿ, ಕೊಲ್ಲೂರುಗಳಲ್ಲಿ ಟ್ರೆಕ್ಕಿಂಗ್ ಹಾಗೂ ಕ್ಯಾಂಪಿಂಗ್, ಅಜ್ದರಕಾಡು ಬಯಲು ರಂಗಮಂದಿರದಲ್ಲಿ ಶ್ವಾನಪ್ರದರ್ಶನ ಆಯೋಜಿಸಲಾಗುತ್ತಿದೆ ಎಂದು ಪ್ರಮೋದ್ ತಿಳಿಸಿದರು.
ಇವುಗಳ ಜೊತೆಯಲ್ಲೇ ಮಲ್ಪೆಯಲ್ಲಿ ಆಹಾರ ಮೇಳ, ಗೂಡುದೀಪ ಸ್ಪರ್ಧೆ, ಸ್ಕೂಬಾ ಡೈವಿಂಗ್(ಕಾಪು), ವೈನ್ ಉತ್ಸವ, ಸೈಂಟ್ ಮೇರೀಸ್ ದ್ವೀಪದಲ್ಲಿ ಛಾಯಾಚಿತ್ರ ಸ್ಪರ್ಧೆ, ಚಿತ್ರಕಲೆ ಹಾಗೂ ಕಾರ್ಟೂನು ಶಿಬಿರ, ಮರಳು ಶಿಲ್ಪ ಹಾಗೂ ಸಮುದ್ರದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಮಣಿ ಅವರ ಸಂಗೀತ ಕಾರ್ಯಕ್ರಮ, ಆಳ್ವಾಸ್ ಸಂಸ್ಥೆಯಿಂದ ನೃತ್ಯ ವೈಭವ, ಪ್ರಹ್ಲಾದ ಆಚಾರ್ಯರ ಜಾದೂ ಪ್ರದರ್ಶನ, ವಿವಿಧ ತಂಡಗಳಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಮಣಿ ಅವರ ಸಂಗೀತ ಕಾರ್ಯಕ್ರಮ, ಆಳ್ವಾಸ್ ಸಂಸ್ಥೆಯಿಂದ ನೃತ್ಯ ವೈವ,ಪ್ರಹ್ಲಾದಆಚಾರ್ಯರಜಾದೂಪ್ರದರ್ಶನ,ವಿವಿ ತಂಡಗಳಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ. ಈ ಸಾಹಸಿ ಕ್ರೀಡೆಗಳನ್ನು ತನ್ನ ಅಧ್ಯಕ್ಷತೆಯ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಪ್ ಅಡ್ವೆಂಚರ್‌ನ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಹಸ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬುದೇ ತಮ್ಮ ಉದ್ದೇಶವಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ದಿವಾಕರಬಾಬು, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಸಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಕೋಸ್ಟಲ್ ಟೂರಿಸಂನ ಮನೋಹರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ಮಲ್ಪೆಯಲ್ಲಿ ರಾಷ್ಟ್ರೀಯ ಓಪನ್ ವಾಟರ್ ಈಜು
ದೇಶದ ಮೊತ್ತಮೊದಲ ರಾಷ್ಟ್ರೀಯ ಜೂನಿಯರ್ ಮುಕ್ತ ಈಜು (ಓಪನ್ ವಾಟರ್ ಸ್ವಿಮ್ಮಿಂಗ್) ಚಾಂಪಿಯನ್‌ಷಿಪ್ ಮಲ್ಪೆ ಕಡಲಿನಲ್ಲಿ ಡಿ.30 ಮತ್ತು 31ರಂದು ನಡೆಯಲಿದೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.
ಭಾರತದ ಈಜು ಫೆಡರೇಷನ್‌ನ ಆಶ್ರಯದಲ್ಲಿ ಕರ್ನಾಟಕ ಈಜು ಸಂಸ್ಥೆ ಈ ಚಾಂಪಿಯನ್‌ಷಿಪ್‌ನ್ನು ಉಡುಪಿ ಜಿಲ್ಲಾಡಳಿತ ಹಾಗೂ ಯುವಜನ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಿದೆ. ತೆರೆದ ಸಮುದ್ರದಲ್ಲಿ ದೇಶದಲ್ಲೇ ನಡೆಯುವ ಮೊತ್ತ ಮೊದಲ ಮುಕ್ತ ಈಜು ಸ್ಪರ್ಧೆ ಇದಾಗಿದೆ ಎಂದವರು ನುಡಿದರು.
ಇದರಲ್ಲಿ ಅಗ್ರಸ್ಥಾನ ಪಡೆದ ಈಜುಪಟುಗಳು ವಿಶ್ವ ಜೂನಿಯರ್ ಮುಕ್ತ ಈಜು ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅರ್ಹತೆ ಪಡೆಯಲಿದ್ದಾರೆ ಎಂದೂ ಪ್ರಮೋದ್ ತಿಳಿಸಿದರು.







