ತುಳು ಸಂಸ್ಕೃತಿಯ ದಾಖಲೀಕರಣ ಅಗತ್ಯ: ಡಾ.ವೈ.ಎನ್.ಶೆಟ್ಟಿ

ಉಡುಪಿ, ಡಿ.15: ತುಳು ಸಂಸ್ಕೃತಿ ಇಂದು ಕಣ್ಮರೆಯಾಗುತ್ತಿದೆ. ಆದುದರಿಂದ ಅವುಗಳ ದಾಖಲೀಕರಣ, ಪುಸ್ತಕ ರಚನೆ ಕಾರ್ಯ ಅಗತ್ಯವಾಗಿ ನಡೆಯಬೇಕಾ ಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ.ವೈ.ಎನ್.ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿ ತುಳುಕೂಟ ಹಾಗೂ ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯ ದಲ್ಲಿ ಉಡುಪಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿ ಗಾಗಿ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಲಾದ ತುಳು ನಡಕೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತುಳು ಲಿಪಿಯನ್ನು ಅನೇಕರು ಸಂಶೋಧಿಸಿದ್ದು, ಆ ಎಲ್ಲ ಸಂಶೋಧಕರನ್ನು ಕರೆಸಿ ಅದರಲ್ಲಿ ಒಂದು ಪ್ರಾಚೀನವಾದ ಲಿಪಿಯನ್ನು ಅಧಿಕೃತ ತುಳು ಲಿಪಿ ಎಂದು ಅಕಾಡೆಮಿ ಘೋಷಿಸಿದೆ. ಇದೀಗ ಅದನ್ನು ಯುನಿಕೋಡ್‌ಗೆ ಸೇರಿಸುವ ಕೆಲಸ ನಡೆಯುತ್ತಿದೆ. ಇದರಿಂದ ಈ ಲಿಪಿ ಪ್ರಪಂಚದ ಸುಮಾರು 190 ಭಾಷೆಗಳಿಗೆ ತರ್ಜುಮೆಯಾಗಲಿದೆ ಎಂದು ಅವರು ತಿಳಿಸಿದರು.
ಕೃಷಿ ಬದುಕು ಕಡಿಮೆಯಾಗುತ್ತಿದ್ದಂತೆ ತುಳು ಶಬ್ದಗಳು ಕೂಡ ಮಾಯವಾಗು ತ್ತಿವೆ. ಆದುದರಿಂದ ಕೃಷಿಗೆ ಪುನಶ್ಚೇತನ ನೀಡುವುದರಿಂದ ತುಳು ಭಾಷೆಯನ್ನು ಬೆಳೆಸಬಹುದಾಗಿದೆ. ನಾವು ಪಾಶ್ಚಿಮಾತ್ಯ ಆಹಾರಕ್ಕೆ ಮಾರುಹೋಗಿ ತುಳು ನಾಡಿನ ಆಹಾರವನ್ನು ಮರೆಯುತ್ತಿದ್ದೇವೆ. ಇದರಿಂದ ಅನೇಕ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ ಎಂದರು.
ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿ ದ್ದರು. ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೇಖರ್ ಕೋಟ್ಯಾನ್, ಉಪಾಧ್ಯಕ್ಷ ಪ್ರಕಾಶ್ ಅಂದಾದ್ರೆ, ತಾರಾ ಆಚಾರ್ಯ, ಉಪನ್ಯಾಸಕ ದಯಾನಂದ, ತುಳು ಕೂಟದ ಗಂಗಾಧರ ಕಿದಿಯೂರು, ಮುಖ್ಯೋಪಾಧ್ಯಾಯ ವಿಶ್ವನಾಥ ಬಾಯರಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಸ್ವಾಗತಿಸಿದರು. ತುಳು ಕೂಟದ ಯಶೋಧಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಜಿ. ಎಸ್.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಕಾರ್ಯಕ್ರಮ ಗಳು, ಕವಿಗೋಷ್ಠಿ, ತುಳು ಬದುಕಿನ ಕುರಿತ ವಸ್ತು ಪ್ರದರ್ಶನಗಳು ಜರಗಿದವು.







