ಡಿ.17ರಂದು ‘ಹೈದರಬಾದ್ ವಿಜಯ’ ಯಕ್ಷಗಾನ ತಾಳಮದ್ದಳೆ
'70 ವರ್ಗಳ ಬಳಿಕ ಇತಿಹಾಸ ಮರುಸೃಷ್ಠಿ'
ಉಡುಪಿ, ಡಿ.15: ಉಡುಪಿ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ 1948ರಲ್ಲಿ ನಡೆದ ನವಭಾರತ ದೈನಿಕದ ಸಂಪಾದಕರಾಗಿದ್ದ ಎಂ.ವಿ.ಹೆಗ್ಡೆ ರಚಿಸಿ ಪ್ರಕಟಿಸಿದ ‘ಹೈದರಬಾದ್ ವಿಜಯ’ ಯಕ್ಷಗಾನ ತಾಳಮದ್ದಳೆಯು ಇದೀಗ 70ವರ್ಷಗಳ ಬಳಿಕ ಡಿ.17ರಂದು ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.
ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಈ ಐತಿಹಾಸಿಕ ಘಟನೆಯ ಮರು ಸ್ಮರಣೆ, ಮರುಸೃಷ್ಠಿ ಮಾಡಲಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆಗೆ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ, ಬಳಿಕ ರಾಜಾಂಗಣದಲ್ಲಿ ತಾಳಮದ್ದಲೆ ಜರಗಲಿದೆ ಎಂದು ಪ್ರೊ.ಎಂ.ಎಲ್.ಸಾಮಗ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಹೈದರಬಾದ್ ಪ್ರದೇಶ ನಿಜಾಮನಿಂದ ಮುಕ್ತಿಗೊಂಡು ಭಾರತದೊಂದಿಗೆ ವಿಲೀನವಾದ ಘಟನೆಯನ್ನು ಆಧರಿಸಿದ ಈ ತಾಳಮದ್ದಲೆಯಲ್ಲಿ ರಾಜಾಜಿ, ನೆಹರೂ, ವಲ್ಲಭಭಾಯಿ ಪಟೇಲ್, ಕಾಸಿಮ್ ರಜ್ವಿ, ನಿಜಾಮ್, ಲಾಯಕ್ ಅಲಿ, ರಾಜೇಂದ್ರ ಸಿಂಹ, ಜಿ.ಕೆ.ಎನ್.ಚೌಧರಿ ಪಾತ್ರಗಳಿವೆ.
ಕಲಾವಿದರಾದ ಕುಂಬ್ಳೆ ಸುಂದರ ರಾವ್, ಪ್ರೊ.ಎಂ.ಎಲ್.ಸಾಮಗ, ಡಾ. ಪಾದೆಕಲ್ಲು ವಿಷ್ಣುಭಟ್, ಪ್ರೊ.ನಾರಾಯಣ ಹೆಗಡೆ, ಸದಾಶಿವ ಆಳ್ವ, ಅಪ್ಪು ನಾಯಕ್ ಆತ್ರಾಡಿ, ರಮಣ ಆಚಾರ್ಯ, ಪ್ರಶಾಂತ್ ಬೇಳೂರು ಅರ್ಥಧಾರಿ ಯಾಗಿ, ಭಾಗವತ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಎಂ.ವಿ.ಹೆಗ್ಡೆ ಯಕ್ಷನಮನ ಕಾರ್ಯಕ್ರಮ ನಡೆ ಯಲಿದ್ದು, ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಅಧ್ಯಕ್ಷತೆ ಯನ್ನು ಡಾ.ಎಂ.ಮೋಹನ್ ಆಳ್ವ ವಹಿಸಲಿರುವರು. ಸಚಿವ ಪ್ರಮೋದ್ ಮಧ್ವ ರಾಜ್ ಮೊದಲಾದವರು ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಸುಧಾಕರ ಆಚಾರ್ಯ, ಸಲಹೆಗಾರರಾದ ಸುರೇಶ್ ಹೆಗ್ಡೆ, ಭುವ್ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.







